
ರಾಜ್ಯದ ಉತ್ತರ ಭಾಗದಲ್ಲಿ “ಕಾರ ಹುಣ್ಣಿಮೆ” ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.
ಒಂದೇ ಪದಗಳಲ್ಲಿ ಹೇಳುವುದೇ ಆದರೆ ಒಕ್ಕಲುತನದಲ್ಲಿ ನಮ್ಮ ಜತೆಗೂಡಿದ ನಮ್ಮೊಡನೆ ದುಡಿದು ದಣಿದ ರಾಸುಗಳಿಗೆ ಕೃತಜ್ಞಾತಾಪೂರ್ವಕ ಸಂಬ್ರಮವೆ ಈ ಕಾರ ಹುಣ್ಣಿಮೆ.
ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆಯು ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣುಮೆಯ ಆಗಮನಕ್ಕಾಗಿ ಕಾಯುತ್ತಿರುವ ನಾಗರ ಪಂಚಮಿ ‘ಬಂದ್ಯಾ ಬಂಗಾರದ ಕರಣಿ, ಕಾರುಣ್ಣಿ’ ಎಂದಿತಂತೆ ಅಕ್ಕರೆಯಿಂದ. ಅದಕ್ಕುತ್ತರವಾಗಿ ಕಾರ ಹುಣ್ಣಿಮೆ ‘ಬಂದೀನಿ ತಗೊಳೋ ನಿನ್ನ ಹಿಟ್ಟಿನ ಮೂಳನ ಹಡ್ಡಿ’ ಎಂದಿತಂತೆ ವ್ಯಂಗ್ಯವಾಗಿ.
ಹುಣ್ಣಿಮೆಗಿಂತೂ ಮೊದಲ ದಿನಕ್ಕೆ ‘ಹೊನ್ನ ಹುಗ್ಗಿ’ ಎಂದು ಕರೆಯುತ್ತಾರೆ. ಅಂದು ಜೋಳವನ್ನು ಕುಟ್ಟಿ ಮಾಡಿದ ಕಿಚಡಿಯನ್ನೇ ಮನೆದೇವರಿಗೆ ಸಂಜೆ ನೈವೇದ್ಯ ಮಾಡುತ್ತಾರಲ್ಲದೇ ಪೂಜೆಗೊಂಡ ಜಾನುವಾರುಗಳಿಗೂ ತಿನಿಸುತ್ತಾರೆ. ಕಾರ ಹುಣ್ಣಿಮೆಯ ದಿನ ಎಲ್ಲ ಜಾನುವಾರಗಳಿಗೂ ಜೋಳದ ಅಂಬಲಿ, ಗಾನದೆಣ್ಣೆ, ಅರಿಷಿಣ ಪುಡಿ (ಕೆಲವರು ಕೋಳಿಯ ತತ್ತಿಯನ್ನು ಹಾಕುತ್ತಾರೆ) ಸೇರಿಸಿ ಗೊಟ್ಟದ ಮೂಲಕ ಗಂಟಲಕ್ಕೆ ಸುರುವುತ್ತಾರೆ. ಮಳೆಗಾಲದ ತಂಪಿನ ವಾತಾವರಣಕ್ಕೆ ಜಾನುವಾರುಗಳೂ ಹೊಂದಿಕೊಳ್ಳಲು ಈ ವ್ಯವಸ್ಥೆ ಎನ್ನುತ್ತಾರೆ.
ಕಾರ ಹುಣ್ಣಿಮೆ ಅಪ್ಪಟ ರೈತರ ಹುಣ್ಣಿಮೆ. ಈ ಹುಣ್ಣಿಮೆಯ ದಿನ ರೈತರು ತಮ್ಮ ಮಳೆ ಬೆಳೆಯನ್ನು ತಿಳಿಯುವ ಕಾರ್ಣಿಕದ ಹಬ್ಬವೆಂಬಂತೆ ಆಚರಿಸುತ್ತಾರೆ. ತಮ್ಮ ಒಡನಾಡಿಗಳಾದ ಎತ್ತುಗಳಿಗೆ ಸಿಂಗಾರ ಮಾಡಿ ಓಡಿಸುವ ಮೂಲಕ ಕಾರಹುಣ್ಣಿಮೆ ಕರಿ ಹರಿಯುತ್ತಾರೆ.
ಮುಂಗಾರು ಮಳೆ ಆರಂಭವಾದ ನಂತರ ಬರುವ ಕಾರ ಹುಣ್ಣಿಮೆಯನ್ನು ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಹಬ್ಬವೆಂಬಂತೆ ಆಚರಿಸುತ್ತಾರೆ. ಕಾರ ಹುಣ್ಣಿಮೆಯ ದಿನ ತಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳನ್ನು ಪೂಜಿಸುತ್ತಾರೆ.

ಎತ್ತು ಹುಸುಗಳನ್ನು ತೊಳೆದು ಸಿಂಗರಿಸಿ, ಕೊಂಬುಗಳನ್ನು ಕೆತ್ತಿಸಿದ ರೈತರು ಎತ್ತುಗಳಿಗೆ ಬಣ್ಣಗಳಿಂದ ಸಿಂಗಾರ ಮಾಡಿ ಸಂಜೆ ವೇಳೆಗೆ ತಮ್ಮ ಎತ್ತುಗಳ ಸಾಮಾರ್ಥ್ಯವನ್ನು ಅಳೆಯಲು ಓಡಿಸುತ್ತಾರೆ. ಈ ವೇಳೆ ಹಲವರು ಓಡುವ ಎತ್ತುಗಳನ್ನ ಹಿಡಿದು ನಿಲ್ಲಿಸಲು ಪ್ರಯತ್ನಿಸುತ್ತಾರೆ. ಇದನ್ನೇ ಕರಿ ಹರಿಯುವುದು ಎಂದು ಕರೆಯುತ್ತಾರೆ.
ಗ್ರಾಮದ ಅಗಸಿಯ (ಚಾವಡಿ) ಮುಂದೆ ಬೇವಿನ ತಪ್ಪಲು, ನೇರಳೆ ಹಣ್ಣು, ಕೊಬ್ಬರಿಯನ್ನು ಪೋಣಿಸಿದ ಸರ ತಯಾರಿಸಿದ್ದು, ಅಗಸಿಗೆ ಅಡ್ಡವಾಗಿ ಈ ಸರವನ್ನು ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳನ್ನು ಓಡಿಸುತ್ತಾ ಕೊನೆಗೆ ಅಗಸಿಯೊಳಗಾಗಿ ಓಡುವಂತೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಕೆಂದು ಬಣ್ಣದ ಎತ್ತು ಮೊದಲು ಬಂದರೆ ಕೆಂಪು ಕಾಳುಗಳು, ಬಿಳಿ ಎತ್ತು ಮೊದಲು ಬಂದರೆ ಬಿಳಿ ಧಾನ್ಯ ಉತ್ತಮವಾಗಿ ಬೆಳೆಯುತ್ತದೆ ಎಂದು ನಂಬಿಕೆಯಿದೆ. ಈ ವೇಳೆ ರಾಸುಗಳ ಓಟ ರೋಮಾಂಚನಕಾರಿಯಾಗಿರುತ್ತದೆ

ರೈತ ಮತ್ತು ಜಾನುವಾರಗಳ ನಡುವಿನ ಬಾಂಧವ್ಯ ತಂದೆ ಮಕ್ಕಳ ಹಾಗೆ ಇರುತ್ತದೆ,ಮಕ್ಕಳ ಹುಟ್ಟು ಹಬ್ಬದ ಸಂಬ್ರಮದಂತೆ ಕೃಷಿಕರು ಜಾನುವಾರುಗಳನ್ನು ಸಿಂಗರಿಸಿ ಸಂಭ್ರಮಿಸುತ್ತಾರೆ.
ಕವಿ ದರಾ ಬೇಂದ್ರೆ ಹೇಳುವಂತೆ
ಹರಗೋಣ ಬಾ ಹೊಲ ಹೊಸದಾಗಿ ಬಿದ್ದೈತೆ ಹ್ಯಾಗೋ ಕಾಲ್ ಕಸವಾಗಿ
ನಂಬಿಗಿಲೆ ದುಡೀತಾನ ಬಸವಣ್ಣ
ನಂಬಿಗ್ಯಾಗೈತೆ ಅವನ ಕಸುವಣ್ಣಾ
ಕಸುವೀಲೆ ಬೆಳೆಸೋಣ ಎತ್ತುಗೋಳು
ಎತ್ತಲ್ಲಾ ಅವು ನಮ್ಮ ಮುತ್ತುಗೋಳು
ಎಲ್ಲಾ ಒಕ್ಕಲುತನದ ಬಂಧುಗಳಿಗೆ ಕಾರ ಹುಣ್ಣಿಮೆಯ ಶುಭಾಶಯಗಳು..
(ಸಂಗ್ರಹ ಬರಹ)
ಸತೀಶ್ ಗೌಡ✍