ದುಬೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಹದಿಮೂರನೇ ಆವೃತ್ತಿಯ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೊದಲ ಪಂದ್ಯದಲ್ಲಿ ನಿರೀಕ್ಷೆಯಂತೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಡಲಿವೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು ಈ ತಂಡಗಳು ಮುಖಾಮುಖಿಯಾಗಲಿವೆ.
ಇತ್ತೀಚೆಗೆ ಬಿಡುಗಡೆಯಾದ ಪಂದ್ಯಗಳ ವೇಳಾಪಟ್ಟಿ ಪ್ರಕಾರ, ಐಪಿಎಲ್ 13 ರ ಆರಂಭಿಕ ಮುಖಾಮುಖಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಜೊತೆ ನಡೆಯಲಿದ್ದು, ಹದಿಮೂರನೆಯ ಆವೃತ್ತಿ ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ನಡೆಯಲಿದೆ.
ಐಪಿಎಲ್‍ನ ಹದಿಮೂರನೇ ಆವೃತ್ತಿ ಯು ಅಬುಧಾಬಿ, ದುಬೈ, ಮತ್ತು ಶಾರ್ಜಾ ದಲ್ಲಿ 56 ದಿನಗಳ ಕಾಲ ನಡೆಯಲಿದೆ. ಎಂಟು ತಂಡಗಳು ಐಪಿಎಲ್ ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10ರಂದು ನಡೆಯಲಿದೆ. ಪ್ಲೇ ಆಫ್ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.
ವಿರಾಟ್ ಕೊಹ್ಲಿ ಸಾರಥ್ಯದ ಬೆಂಗಳೂರಿನ ಆರ್ಸಿಬಿ ತಂಡ ಸೆಪ್ಟೆಂಬರ್ 21ರಂದು ಸನ್ರೈಸರ್ಸ್ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ. ಸೆಪ್ಟೆಂಬರ್ 20ರಂದು ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣಸಲಿವೆ. ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.
ಎಲ್ಲಾ ಎಂಟು ಫ್ರಾಂಚೈಸಿಗಳು ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭಾರತದಲ್ಲಿನ ಆಯಾ ಶಿಬಿರಗಳು ಮತ್ತು ನೆಲೆಗಳಲ್ಲಿ ಸಂಪೂರ್ಣ ಪರೀಕ್ಷೆ ಮತ್ತು ಕ್ವಾರಂಟೈನ್ ಪ್ರೋಟೋಕಾಲ್ ಗಳಿಗೆ ಒಳಪಟ್ಟ ಬಳಿಕ ಬಂದು ತಲುಪಿದೆ.