ಇತ್ತೀಚಿನ ದಿನಗಳಲ್ಲಿ ಕೆಲ ಸ್ವಾರ್ಥಪರ ಮನುಷ್ಯರು ಮನೋವಿಕಾರ ಕ್ಕೊಳಗಾಗುತ್ತಿದ್ದು ವಾಯುಮಾಲಿನ್ಯ, ಜಲಮಾಲಿನ್ಯ, ಪರಿಸರ ಮಾಲಿನ್ಯ ,ಆಹಾರ ಮಾಲಿನ್ಯ ಈ ಎಲ್ಲಾ ಮಾಲಿನ್ಯಗಳಿಗಿಂತ ಲೂ ಮನೋವಿಕಾರಿ ಸ್ವಾರ್ಥ ಮನುಷ್ಯನ ಮನು ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದ್ದು ಇದು ಸಮಾಜದ ಸ್ವಚ್ಛತೆಗೆ ಮಾರಕವಾಗುತ್ತಿದೆ ಎಂದು ಸಾಹಿತಿ ಬನ್ನೂರು ಕೆ ರಾಜು ಹೇಳಿದರು.
ನಗರದ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲೊಂದಾದ ಸರ್ ಎಂ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಇಂದು ಮುಂಜಾನೆ 6ಗಂಟೆಯ ಲ್ಲೇ ಚಾಮುಂಡಿಬೆಟ್ಟದ ಪಾದದ ಬಳಿ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಚಾಮುಂಡಿಬೆಟ್ಟದ ಸಾವಿರ ಮೆಟ್ಟಿಲುಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಪ್ರತಿಯೊಬ್ಬ ಮನುಷ್ಯರು ಸಮಾಜಮುಖಿಯಾಗಿ ಒಳಿತಿನತ್ತ ಚಿತ್ತ ಹರಿಸಿ ಮನೋ ವಿಕಾಸಿಗಳಾಗಬೇಕೆಹೊರತು ಕೆಡುಕಿನತ್ತ ಆಲೋಚಿಸುವ ಮನೋವಿಕಾರಿಗಳಾಗ ಬಾರದೆಂದರು.
ಅವರಿವರ ಮನೆ ಮುಂದೆ ಕಸ ಚೆಲ್ಲುವುದು, ರಸ್ತೆ ಬದಿಗಳಲ್ಲಿ ಗಲೀಜು ಮಾಡುವುದು , ಮಾದಕ ವಸ್ತುಗಳನ್ನು ತಿಂದು-ಕುಡಿದು ರಸ್ತೆಗಳಲ್ಲಿ ಉಗುಳುವುದು , ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲ ಗಳನ್ನು ಬಿಸಾಡುವುದು, ಮದ್ಯ ಸೇವಿಸಿದ ಬಾಟಲಿಗಳನ್ನು, ಬೀಡಿ ಸಿಗರೇಟ್ ಸೇದಿದ ಅವಶೇಷಗಳನ್ನು ಎಲ್ಲೆಂದರಲ್ಲಿ ಎಗ್ಗಿಲ್ಲದೆ ಎಸೆಯುವುದು, ಹೀಗೆ ಎಲ್ಲಾ ರೀತಿಯವಿಷಕಾರಿ ವಸ್ತುಗಳಿಂದ ಸಾರ್ವಜನಿಕ ಸ್ಥಳಗಳನ್ನು ಗಲೀಜು ಮಾಡುವುದು , ವಿನಾಕಾರಣ ಮರ ಗಿಡಗಳನ್ನು ಕಡಿಯುವುದು , ಕೆರೆಕಟ್ಟೆಗಳನ್ನು ಹೋಲಿಸು ಮಾಡುವುದು, ದುಶ್ಚಟಗಳಿಗೆ ಬಲಿಯಾಗಿ ಸ್ವಚ್ಛ ಪರಿಸರವನ್ನು ಹಾಳು ಮಾಡುವುದು ,ಇಂಥದ್ದೆಲ್ಲವೂ ಕೆಲ ಮನುಷ್ಯರ ಮನೋವಿಕಾರ ದಿಂದಾಗುವ ಸಮಾಜದ ಸ್ವಾಸ್ಥ್ಯವನ್ನು , ಸ್ವಚ್ಛತೆಯನ್ನು ಹಾಳುಮಾಡುವ ಕೆಟ್ಟ ಕೆಲಸಗಳು . ಹಾಗಾಗಿ ಕೆಟ್ಟ ಪರಿಸರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಸ್ವಚ್ಛ ಪರಿಸರವನ್ನು ಹಾಳು ಮಾಡುವ ಮನೋವಿಕಾರಿ ಮನುಷ್ಯರನ್ನು ತಿದ್ದುವ ಕೆಲಸವನ್ನೂ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸ್ವಚ್ಛತಾ ಕಾರ್ಯ ಮಾಡುತ್ತಿರುವುದು ಇಡೀ ಸಮಾಜ ಮೆಚ್ಚುವಂತಹ ಕಾರ್ಯವಾಗಿದೆ ಎಂದು ಶ್ಲಾಘಿಸಿದರು. ಸಂಘದ ಅಧ್ಯಕ್ಷ ಎಸ್. ಮಹೇಶ್ ಜಯನಗರ, ಕಾರ್ಯದರ್ಶಿ ಕಾಳೇಗೌಡ . ಖಜಾಂಚಿ ಎಂ. ರವಿಕುಮಾರ್ ಮಾತನಾಡಿದರು. ಉಪಾಧ್ಯಕ್ಷ ಸುರೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಪಳನಿಸ್ವಾಮಿ, ನಿರ್ದೇಶಕರಾದ ಚಂದ್ರೇಗೌಡ, ಕುಮಾರ್ ,ಏಜಾಜ್ ಪಾಷಾ,ಯೋಗೇಶ್, ಸಂತೋಷ್ ಕುಮಾರ್ , ಪ್ರಕಾಶ್ , ಲಕ್ಷ್ಮಣ ಹಾಗೂ ಕನ್ನಡ ಹೋರಾಟಗಾರ ಅರ್. ಎ. ರಾಧಾಕೃಷ್ಣ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಂಘದ ನೂರಾರು ಮಂದಿ ಕಾರ್ಯಕರ್ತರು ಒಟ್ಟಾರೆ ಸೇರಿಕೊಂಡು ಚಾಮುಂಡಿಬೆಟ್ಟದ ಸಾವಿರ ಮೆಟ್ಟಿಲುಗಳನ್ನೂ ಜನ ಮೆಚ್ಚುವಂತೆ ಸ್ವಚ್ಛಗೊಳಿಸಿದರು. ಫೋಟೋ ಶೆಷನ್ ಗಾಗಿ , ಅಗ್ಗದ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವ ಕೆಲವು ಸಂಘ ಸಂಸ್ಥೆಗಳ ನಡುವೆ ನಿಸ್ವಾರ್ಥವಾಗಿ ನೈಜ ಸಾಮಾಜಿಕ ಕಾಳಜಿಯಿಂದ ಸ್ವಚ್ಛತಾ ಕೆಲಸ ಮಾಡಿದ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘವು ಆದರ್ಶಮಯವಾಗಿ ಎಲ್ಲರ ಗಮನ ಸೆಳೆದಿತ್ತು.