
ಹೊಸದಿಲ್ಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಸೆ.12ರಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಹಾಗೂ ಸೆ.10ರಿಂದ ಟಿಕೆಟ್ ಕಾಯ್ದಿರಿಸುವಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ತಿಳಿಸಿದ್ದಾರೆ.
ದೇಶದೆಲ್ಲೆಡೆ ಈಗಾಗಲೇ 230 ರೈಲುಗಳು ಸಂಚರಿಸುತ್ತಿದ್ದು, ಇದರೊಂದಿಗೆ ಹೊಸದಾಗಿ 80 ರೈಲುಗಳು ಸೆ.12ರಿಂದ ಸಂಚರಿಸಲಿವೆ. ಅಲ್ಲದೇ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಸೆ.10ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಸಂಚರಿಸುತ್ತಿರುವ ರೈಲುಗಳಲ್ಲಿ ಯಾವ ರೈಲುಗಳಿಗೆ ಹೆಚ್ಚು ಪ್ರಯಾಣಿಕರು ಕಾಯುತ್ತಾರೆ ಎಂಬ ಕುರಿತು ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಹೀಗಾಗಿ ಯಾವ ರೈಲಿಗೆ ಹೆಚ್ಚು ಬೇಡಿಕೆ ಇದೆ, ಯಾವ ರೈಲಿಗೆ ಹೆಚ್ಚು ಪ್ರಯಾಣಿಕರು ಕಾಯುತ್ತಾರೆ ಎಂಬುದನ್ನು ಗಮನಿಸಿ ಅದರ ಆಧಾರದಲ್ಲಿ ಹೆಚ್ಚುವರಿ ರೈಲು ವ್ಯವಸ್ಥೆ ಮಾಡುವ ಬಗ್ಗೆ ನಿಗಾವಹಿಸಲಾಗುವುದು. ಅಲ್ಲದೇ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರೈಲಿನ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಬುಲೆಟ್ ರೈಲು ಯೋಜನೆ ಪ್ರಗತಿಯಲ್ಲಿದ್ದರೂ, ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂದು ಮಾಹಿತಿ ನೀಡಿದ್ದಾರೆ.