
ಐಪಿಎಲ್: ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳಾಪಟ್ಟಿ ಬಿಡುಗಡೆಗೆ ಕಾಲ ಕೂಡಿ ಬಂದಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ದುಬೈನಲ್ಲಿ ನಡೆಯಲಿದ್ದು, ಸೆ.19ರಿಂದ ನವೆಂಬರ್ 10ರವರೆಗೆ ನಡೆಯುವ ಪಂದ್ಯಾವಳಿ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ದುಬೈನಲ್ಲಿ ವಾಸ್ತವ್ಯ ಹೂಡಿವೆ. ಆದರೆ ಟೂರ್ನಿಗೆ 2 ವಾರಗಳಷ್ಟೇ ಬಾಕಿಯಿದ್ದರೂ, ಅಧಿಕೃತ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿರಲಿಲ್ಲ. ಇದು ಎಲ್ಲಾ ತಂಡಗಳ ಆಟಗಾರರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು.
ಆದರೆ ಇದೀಗ ಟೂರ್ನಿಯ ಅಧಿಕೃತ ವೇಳಾಪಟ್ಟಿ ಸೆ.6ರಂದು ಬಿಡುಗಡೆಯಾಗಲಿದೆ ಎಂದು ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ತಮ್ಮ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದು, ಕೊನೆಯ ತಂಡವಾಗಿ ಸಿಎಸ್ಕೆ ಅಭ್ಯಾಸ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.
ವಾರದ ಮಧ್ಯದಲ್ಲಿ ಫೈನಲ್:
ಈವರೆಗೂ 12 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಪಿಎಲ್ ಟೂರ್ನಿಯ ಈವರೆಗಿನ ಎಲ್ಲಾ ಟೂರ್ನಿಯ ಫೈನಲ್ ಪಂದ್ಯಗಳು ವಾರಾಂತ್ಯದಲ್ಲಿ ನಡೆದಿವೆ. ಆದರೆ ಇದೇ ಮೊದಲ ಬಾರಿಗೆ 13ನೇ ಆವೃತ್ತಿಯ ಫೈನಲ್ ಪಂದ್ಯ ವಾರದ ಮಧ್ಯದಲ್ಲಿ ನಡೆಯುತ್ತಿದೆ. ಅಲ್ಲದೇ ಈ ಬಾರಿಯ ಪಂದ್ಯಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದ್ದು, ಸಂಜೆ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ರಿಂದ ಆರಂಭಗೊಳ್ಳುತ್ತಿರುವುದು ವಿಶೇಷ.