ಮದುವೆಯಾದರೆ ಬೇರೆ ಆಗುತ್ತವೆ ಎಂಬಾ ಭಯದಲ್ಲಿ ಅವಳಿ ಸಹೋದರಿಯರು ಆತ್ಮಹತ್ಯೆ


ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಅವಳಿ ಜವಳಿ ಸಹೋದರಿಯರಿಬ್ಬರೂ ನೇಣಿಗೆ ಕೊರಳೊಡ್ಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಮದುವೆಯಾದರೆ ಇಬ್ಬರೂ ಬೇರೆಬೇರೆಯಾಗಬೇಕಾಗುತ್ತದೆ ಎಂದು ಯೋಚಿಸಿದ ಸಹೋದರಿಯರು ಬೇರ್ಪಡಲು ಇಚ್ಛಿಸದೇ ಒಟ್ಟಿಗೆ ಸಾಯಲು ನಿರ್ಧರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದ ಸಹೋದರಿಯರು ಚಿಕ್ಕಂದಿನಿಂದಲೂ ಅನ್ಯೋನ್ಯವಾಗಿದ್ದು ಸಾವಿನಲ್ಲೂ ಜತೆಯಾಗುವ ಕಟು ನಿರ್ಧಾರ ತೆಗೆದುಕೊಂಡಿರುವುದು ಎಲ್ಲರ ಕರುಳು ಹಿಂಡುತ್ತಿದೆ. ಮನೆಯ ಬೇರೆ ಬೇರೆ ಕೊಠಡಿಗಳಲ್ಲಿ ನೇಣು ಹಾಕಿಕೊಂಡ ದೀಪಿಕಾ (19 ವರ್ಷ) ಹಾಗೂ ದಿವ್ಯಾ (19 ವರ್ಷ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಳಿ ಜವಳಿ ಸಹೋದರಿಯರ ಸಾವಿಗೆ ಕಾರಣ ತಿಳಿದ ಎಲ್ಲರೂ ಮರುಗಿದ್ದಾರೆ.


ಬಾಲ್ಯದಿಂದಲೂ ಜತೆಯಾಗಿಯೇ ಇದ್ದವರು ವಿವಾಹದ ನಂತರ ಬೇರೆ ಬೇರೆ ಮನೆ ಸೇರಬೇಕಾಗುತ್ತದೆ. ಒಟ್ಟಿಗೆ ಇರಲಾಗುವುದಿಲ್ಲ. ಮದುವೆಯಿಂದ ನಾವು ದೂರವಾಗುತ್ತೇವೆ ಎಂದು ಯೋಚಿಸಿದ ದೀಪಿಕಾ ಮತ್ತು ದಿವ್ಯಾ ದುಡುಕಿ ಸಾವಿನ ಹಾದಿ ತುಳಿದಿದ್ದಾರೆ. ಅನ್ಯೋನ್ಯತೆಯಿಂದ ಇದ್ದ ಇಬ್ಬರೂ ಹೀಗೆ ಏಕಾಏಕಿ ಸಾವಿಗೆ ಶರಣಾಗಿದ್ದು ಮನೆಯವರನ್ನು ದಿಗ್ಭ್ರಾಂತರನ್ನಾಗಿಸಿದೆ. ಇಬ್ಬರೂ ಸಹೋದರಿಯರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿದ್ದು, ಆ ದೃಶ್ಯವನ್ನು ನೋಡಿದವರು ಕಣ್ಣೀರಾಗಿದ್ದಾರೆ.
ಇಬ್ಬರೂ ಹೆಣ್ಣು ಮಕ್ಕಳು ದೊಡ್ಡವರಾಗಿದ್ದಾರೆ. ಆದ್ದರಿಂದ ಮದುವೆ ಮಾಡಿಬಿಡೋಣ ಎಂದು ದಿವ್ಯಾ ಹಾಗೂ ದೀಪಿಕಾ ಅವರ ತಂದೆ, ತಾಯಿ ಸುರೇಶ್ ಮತ್ತು ಯಶೋದ ನಿರ್ಧರಿಸಿದ್ದರು. ಅದರಂತೆಯೇ, ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಬೇರೆ ಬೇರೆ ಮನೆಗಳನ್ನು ಸೇರಿದರೆ ತಮ್ಮ ಬಾಂಧವ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಚಿಂತಿಸಿದ ಸಹೋದರಿಯರು ಸಂಜೆ ವೇಳೆಗೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವಳಿ ಸಹೋದರಿಯರು ಮದುವೆಯ ನಂತರ ಬೇರೆಯಾಗಬೇಕಲ್ಲಾ ಎಂದು ಯೋಚಿಸಿದ ಹೆಣ್ಣುಮಕ್ಕಳಿಗೆ ಆ ವಿಷಯವನ್ನು ಅರಗಿಸಿಕೊಳ್ಳಲಾಗದೇ ಹೀಗೆ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಎಲ್ಲರನ್ನೂ ದುಃಖದ ಮಡುವಿಗೆ ನೂಕಿದೆ. ಈ ಅವಳಿ ಸಹೋದರಿಯರು ಬಾಲ್ಯದಿಂದಲೂ ಅನ್ಯೋನ್ಯತೆಯಿಂದಿದ್ದು ಈಗಲೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಸದಾ ಒಬ್ಬರಿಗೊಬ್ಬರು ಹೆಗಲಾಗಿರುತ್ತಿದ್ದರು ಎನ್ನಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *