ಕೊರೊನಾ ಮೃತರ ಮನೆ ಕಡೆ ಶಾಸಕರ ನಡೆ!

ಚಾಮರಾಜನಗರ: ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದರೊಂದಿಗೆ ವೈಯಕ್ತಿಕ ಪರಿಹಾರ ನೀಡುವ ಮೂಲಕ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಗಮನಸೆಳೆದಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಕುಟುಂಬಸ್ಥರನ್ನು ಮಾತನಾಡಿಸಿ ಅವರಿಗೆ ಸಾಂತ್ವನ ಹೇಳುವುದಲ್ಲದೆ, ವೈಯಕ್ತಿಕ ಪರಿಹಾರ ನೀಡಿದ್ದಾರೆ. ಇದು ತಮ್ಮ ಕುಟುಂಬದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದು, ಶಾಸಕರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.

ಈ ನಡುವೆ ಕ್ಷೇತ್ರದ ಹಸಗೂಲಿ, ಬೆಂಡಗಹಳ್ಳಿ, ನೇನೇಕಟ್ಟೆ, ಮಳವಳ್ಳಿ, ಲಕ್ಕೂರು, ಮಲ್ಲಮ್ಮನಹುಂಡಿ, ಬಲಚವಾಡಿ, ಬೆರಟಹಳ್ಳಿ, ತೆರಕಣಾಂಬಿ ಮತ್ತು ತೆರಕಣಾಂಬಿಹುಂಡಿ ಹೀಗೆ ತಾಲ್ಲೂಕಿನ ನಾನಾ  ಭಾಗದ ಗ್ರಾಮಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವೈಯಕ್ತಿಕ ಪರಿಹಾರದ ಧನ ವಿತರಿಸಿ, ಸರ್ಕಾರದಿಂದ ದೊರೆಯುವ ಹಣಕಾಸು ಇತರೆ ಎಲ್ಲ ನೆರವು ಕೊಡಿಸುವ ಭರವಸೆ ನೀಡುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ತಾಲ್ಲೂಕಿನಾದ್ಯಂತ ಸಂಚರಿಸಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಹಳ್ಳಿಗಳನ್ನು ಕೊರೊನಾ ಮುಕ್ತ ಮಾಡುವಲ್ಲಿ ಹಾಗೆಯೇ ಲಸಿಕೆ ಪಡೆಯುವಂತೆ ಆದಿವಾಸಿಗಳ ಮನವೊಲಿಸುವಲ್ಲಿಯೂ ಶಾಸಕರು ಕಾರ್ಯೋನ್ಮುಖರಾಗುತ್ತಿರುವುದು ಕಂಡು ಬಂದಿದೆ.

Leave a Reply

Your email address will not be published. Required fields are marked *