ಮೈಸೂರು: ರಾಜ್ಯದಲ್ಲಿ ಎಲ್ಲಿಯೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಆಶೋಕ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಗ್ರಾಮಾಂತರ ಕಾರ್ಯಕಾರಿಣಿ ಸಭೆಗೂ ಮುನ್ನ ಮಂಡ್ಯದಲ್ಲಿ ಕಂದಾಯ ಭೂಮಿಯಲ್ಲಿಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಯಿಸಿದರು. ಕೋರ್ಟ್ ಆದೇಶ ಹಾಗೂ ಸರ್ಕಾರದ ಲೈಸೆನ್ಸ್ ಪರಿಮಿತಿಯಲ್ಲಿ ಗಣಿಗಾರಿಕೆ ಮಾಡಬಹುದು. ಕೆಆರ್ಎಸ್ಗೆ ಅಕ್ರಮ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂಬ ಸಣ್ಣ ಸುಳಿವು ಸಿಕ್ಕರೂ ಯಾವುದೇ ಕಾರಣಕ್ಕೂ ಅಲ್ಲಿ ಗಣಿಗಾರಿಕೆ ನಡೆಯಲು ಬಿಡುವುದಿಲ್ಲ. ಹಲವಾರು ಮುಖಂಡರೊಂದಿಗೂ ಈ ಬಗ್ಗೆ ಮಾತನಾಡಿದ್ದೇನೆ. ಇನ್ನೂ ಮುಂದೆ ಅಕ್ರಮವಾಗಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ, ಕ್ಲಷರ್ ನಡೆಸಲು ಬಿಡುವುದಿಲ್ಲ ಎಂದರು.
ಅಭಿವೃದ್ಧಿಯ ಕಾಮಗಾರಿಗಳನ್ನು ನಡೆಸಲು ಜೆಲ್ಲಿ, ಮರಳು ಎಲ್ಲವೂ ಬೇಕಿದೆ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಯಾರು ಬೇಕಾದರೂ ಕ್ಲಷರ್ ಮಾಡಬಹುದು. ಆದರೆ, ಅಕ್ರಮವಾಗಿ ನಡೆಸಲು ರಾಜ್ಯದಲ್ಲಿ ಎಲ್ಲಿಯೂ ಅವಕಾಶವಿಲ್ಲ. ನಾವು ಅದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಯಾರೇ ಹೇಳಿದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೆಆರ್ಎಸ್ ನಮಗೆ ಬಹಳ ಮುಖ್ಯವಾಗುತ್ತದೆ. ನಮಗೆ ಅಲ್ಲಿರುವ ನಾಯಕರಿಗಿಂತ ಕೆಆರ್ಎಸ್ ಮುಖ್ಯವಾಗಿದೆ. ರಾಜ್ಯದ ಜೀವನಾಡಿಯಾಗಿದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ತೊಂದರೆ ಹಾಗೂ ಅಡೆತಡೆಯಾದರೂ ಕೂಡ ಯಾವುದೇ ಕಾರಣಕ್ಕೂ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಬೇಬಿ ಬೆಟ್ಟಕ್ಕೂ ಸಹ ಅಧಿಕಾರಿಗಳ ತಂಡವನ್ನು ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದೇವೆ. ಜಿಲ್ಲಾಧಿಕಾರಿಗಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅಂತಹವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿದ್ದಾರೆ ಎಂದು ತಿಳಿಸಿದರು.
ಪೋಡಿ ಮುಕ್ತ ಗ್ರಾಮ ಮಾಡಲು ಸರ್ಕಾರದ ಆದೇಶ ಹೊರಡಿಸಲಾಗಿದೆ. ಈಗಾಗಲೇ ಹಲವಾರು ತಾಲ್ಲೂಕಿಗಳಲ್ಲಿಯೂ ಕಟ್ಟು ನಿಟ್ಟಿನ ಆದೇಶ ನೀಡಲಾಗಿದೆ. ಪೋಡಿ ಮುಕ್ತ ಗ್ರಾಮ ಹಾಗೂ ಹೊಸ ಗ್ರಾಮಗಳನ್ನು ಲಂಬಾಣಿ, ಕುರುಬರ ತಾಣ, ಹಕ್ಕಿ-ಪಿಕ್ಕಿ ಜನಾಂಗದವರು ಇರುವ ಕಡೆ ಹೊಸ ಗ್ರಾಮಗಳನ್ನಾಗಿ ಮಾಡುವಂತೆ ಹೇಳಲಾಗಿದೆ. ಆ ಮೂಲಕ ಈ ನೆಲದಲ್ಲಿ ಅವರಿಗೂ ಬದುಕುವ ಹಕ್ಕಿದೆ ಎಂಬ ಅವಕಾಶ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಎಂಬುದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರು ಹಳ್ಳಿಗೆ ಭೇಟಿ ನೀಡಿದಾಗಲೂ ಇದೇ ಸಮಸ್ಯೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ ಎಂದರು.