ಮೈಸೂರು: ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿಯವರು ಕೆಆರ್ ಎಸ್ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ವಿಷಯದ ಗಮನಹರಿಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸಲಹೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ವಿಚಾರವನ್ನು ರಾಜಕೀಯಕ್ಕೆ ಎಳೆದು ತರಬೇಡಿ, ಇವತ್ತಿನ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಿರುವಂತೆ ಕಾಣುತ್ತಿದೆ, ರಾಜಕೀಯಕ್ಕಾಗಿ ಬೇರೆ ಏನು ವಿಷಯ ಬೇಕಾದರೂ ಮಾತನಾಡಿಕೊಳ್ಳಲಿ, ಇದನ್ನು ಇಲ್ಲಿಗೇ ಬಿಟ್ಟು ಬಿಡಲಿ. ಕೆಆರ್‌ಎಸ್ ಡ್ಯಾಂ ಬಗ್ಗೆ ವರದಿ ನೀಡಬೇಕಾಗಿರುವುದು ಸರಕಾರ, ಅದನ್ನು ನಮ್ಮ ಸರಕಾರ, ಅಧಿಕಾರಿಗಳು ಮಾಡಿದ್ದಾರೆ ಎಂದು ಹೇಳಿದರು.
ಕೆಆರ್ ಎಸ್ ನಲ್ಲಿ ಯಾವುದೇ ರೀತಿಯ ಬಿರುಕು ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಆ ವಿಚಾರವೇ ಮತ್ತೆ ಚರ್ಚೆಗೆ ಬರುತ್ತಿರುವುದರಿಂದ ಮತ್ತೊಮ್ಮೆ ತಜ್ಞರ ತಂಡವನ್ನು ಕಳುಹಿಸಿ ಪರಿಶೀಲಿಸಲು ಸೂಚನೆ ನೀಡಲಾಗುವುದು. ಈಗಾಗಲೇ ಬಿರುಕು ವಿಚಾರಕ್ಕೆ ಸಂಬಂಧ ಪಟ್ಟಂತೆ ತಜ್ಞರು ವರದಿ ನೀಡಿದ್ದಾರೆ. ಆದರೂ ಇದೇ ವಿಚಾರ ಚರ್ಚೆಯಾಗುತ್ತಿರುವುದರಿಂದ ಮಂಡ್ಯಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಜಿಲ್ಲಾಧಿಕಾರಿ ನೇತೃತ್ವದ ತಜ್ಞರ ತಂಡವನ್ನು ಕಳುಹಿಸಿ ಇಡೀ ಅಣೆಕಟ್ಟೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ತಿಳಿಸಿದರು.
ಸರ್ಕಾರ ತಜ್ಞರ ಮಾತನ್ನಷ್ಟೆ ನಂಬಬೇಕು ಅದರ ಹೊರತಾಗಿ ಬೇರೆ ಯಾರ ಮಾತನ್ನು ನಂಬಲು ಸಾಧ್ಯವಿಲ್ಲ. ಕೆಆರ್‌ಎಸ್‌ಗೆ ಏನಾದರೂ ತೊಂದರೆ ಆಗುತ್ತದೆ ಎಂಬ ಸಣ್ಣ ಸುಳಿವು ಸಿಕ್ಕರೂ ಬೇಬಿಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಗಣಿಗಾರಿಕೆ ನಡೆಸುತ್ತಿರುವವರು ಎಷ್ಟು ಪ್ರಭಾವಿಗಳಾಗಿದ್ದರೂ ಅವರನ್ನು ಲೆಕ್ಕಿಸುವುದಿಲ್ಲ ಎಂದರು.