ಮೈಸೂರು: ಬಸವರಾಜ್ ಬೊಮ್ಮಾಯಿ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಸರ್ಕಾರದ ಮೇಲೆ ಅವರು ಸಹಜವಾಗಿ ಹಿಡಿತಹೊಂದಿರುತ್ತಾರೆ. ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಈ ಕ್ಷಣದಲ್ಲಿ ಬೊಮ್ಮಯಿ ಬಗ್ಗೆ ಏನು ಹೇಳುವುದಿಲ್ಲ. ಅವರ ಆಡಳಿತವನ್ನು ಕಾದು ನೋಡೋಣ. ಈಗಲೇ ಅವರ ಮೇಲೆ ಸುಮ್ಮನೆ ದೂರುವುದಿಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.

ಎಸ್.ಆರ್.ಬೊಮ್ಮಾಯಿ ಅವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮಾ ಗಾಂಧಿ ಮಗ ಮಹಾತ್ಮನಾಗಲಿಲ್ಲ, ಕುಡುಕನಾಗಿದ್ದ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಡಿಯೂರಪ್ಪ ಇಳಿಯದ್ದಿದರೆ. ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಬಿಜೆಪಿ ಐಡಿಯಾಲಜಿ ಬದಲಾಗುತ್ತಾ? ಕೋಮುವಾದ ಹೊರಟುಹೋಗುತ್ತ? ಹಿಂದುತ್ವದ ಅವರ ಅಜೆಂಡಾ ಬದಲಾಗುತ್ತಾ? ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಆದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ. ಆದರೆ ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದರು.
ಸೂಪರ್ ಸಿಎಂ ಎಂಬ ಆರೋಪದಿಂದ ಮುಕ್ತನಾದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂದರೆ ಸೂಪರ್ ಸಿಎಂ ಆಗಿ ಎಂಬುದು ಅವರ ಮಾತಿನ ಅರ್ಥನಾ? ಅದನ್ನ ಒಪ್ಪಿಕೊಂಡಂತೆ ಅಲ್ಲವಾ. ಸಿಎಂ ಆಯ್ಕೆಯಲ್ಲಿ ಯಾರ ಕೈ ಮೇಲಾಗಿದೆ. ಇನ್ನೂ ಮೂರು ತಿಂಗಳು ಏನು ಮಾತನಾಡಲ್ಲ ಎಂದು ನುಡಿದರು.