ಅಭಿಮಾನಿಗೆ ಐದು ಲಕ್ಷ ಪರಿಹಾರ ನೀಡಿದ ಬಿಎಸ್ ವೈ


ಚಾಮರಾಜನಗರ: ಆತ್ಮಹತ್ಯೆ ಮಾಡಿಕೊಂಡ ಬೊಮ್ಮಲಾಪುರ ಗ್ರಾಮದ ಅಭಿಮಾನಿ ಮನೆಗೆ ತೆರಳಿದ ಯಡಿಯೂರಪ್ಪ ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದರಲ್ಲದೆ, ವೈಯುಕ್ತಿಕವಾಗಿ ಐದು ಲಕ್ಷ ರೂಪಾಯಿಗಳ ನೆರವು ನೀಡಿದ್ದು, ಮತ್ತೆ ಐದು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗುವುದು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಯಡಿಯೂರಪ್ಪ ಅವರ ಅಭಿಮಾನಿ ರವಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೆಲಿಕ್ಯಾಪ್ಟರ್ ನಲ್ಲಿ ಗುಂಡ್ಲುಪೇಟೆ ಆಗಮಿಸಿ ಬಳಿಕ ಮೃತನ ಮನೆಗೆ ತೆರಳಿದರು.


ಇದಕ್ಕೂ ಮುನ್ನ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೌರಿಗಣೇಶ ಹಬ್ಬದ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 130 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣತೊಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ಸಚಿವರನ್ನಾಗಿ ಮಾಡುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವಾಗಿದ್ದು, ಅವರೇ ಸಚಿವ ಸಂಪುಟವನ್ನು ಸ್ವತಂತ್ರವಾಗಿ ರಚನೆ ಮಾಡಲಿದ್ದಾರೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿದ್ದು, ಅಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ರಾಜ್ಯ ಸಂಪುಟವನ್ನು ಇನ್ನೊಂದು ವಾರದಲ್ಲಿ ರಚನೆ ಮಾಡುವ ನಿರೀಕ್ಷೆಯಿದೆ ಎಂದರು.
ವಿರೋಧ ಪಕ್ಷದವರು ಮನಸ್ಸಿಗೆ ಘಾಸಿಯಾಗುವಂತಹ ಹೇಳಿಕೆ ನೀಡುವುದು ಸರಿಯಲ್ಲ 2023 ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ 130 ರಿಂದ 135 ಸ್ಥಾನಗಳಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆಯಾಗುವಂತೆ ಮಾಡುವುದಾಗಿ ಹೇಳಿದರು.

Leave a Reply

Your email address will not be published. Required fields are marked *