ರಾಮನಗರ: ಬ್ಯಾಂಕ್ ನಲ್ಲಿ ಗ್ರಾಹಕರು ಅಡವಿಟ್ಟಿದ್ದ ಅಸಲಿ ಚಿನ್ನಾಭರಣಗಳನ್ನು ಕದ್ದು ನಕಲಿ ಚಿನ್ನಾಭರಣವಿರಿಸಿ ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ನ್ನು ಪೊಲೀಸರು ಬಂಧಿಸಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೊನ್ನಿಗನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಬ್ಯಾಂಕ್‌ನ ವ್ಯವಸ್ಥಾಪಕ ಅನಂತನಾಗ್ (42) ಮತ್ತು ಅಸಲಿ ಆಭರಣಗಳನ್ನು ಖರೀದಿಸಿ ನಕಲಿ ಚಿನ್ನಾಭರಣ ನೀಡಿದ ರಜನೀಶ್.ಎಸ್.ಜೈನ್ (42) ಬಂಧಿತರು.
ಹೊನ್ನಿಗನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಸುಮಾರು 352 ಮಂದಿ ಗ್ರಾಹಕರು 2.93 ಕೋಟಿ ರೂ ಮೌಲ್ಯದ 9.5 ಕೆಜಿ ಅಸಲಿ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದರು. ಇದರ ಮೇಲೆ ಕಣ್ಣಿಟ್ಟಿದ್ದ ಬ್ಯಾಂಕ್ ಮ್ಯಾನೇಜರ್ ಅನಂತನಾಗ್ ಹಣ ಮಾಡುವ ಉದ್ದೇಶದಿಂದ ಅಸಲಿ ಚಿನ್ನದ ಆಭರಣಗಳನ್ನು ಮಂಡ್ಯ ಟೌನ್ ಗಾಂಧಿನಗರದ ಗಿರವಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಜನೀಶ್ ಎಂಬಾತನಿಗೆ ಮಾರಾಟ ಮಾಡಿ, ಅಷ್ಟೇ ತೂಕದ ನಕಲಿ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ತಂದಿಟ್ಟಿದ್ದನು.
ಇದಾದ ನಂತರ ಗ್ರಾಹಕರೊಬ್ಬರು ತಾವು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು ಮನೆಗೆ ಹೋಗಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ. ತಕ್ಷಣ ಬ್ಯಾಂಕ್ ಗೆ ಮರಳಿ ಬಂದ ಅವರು ತಮ್ಮ ಚಿನ್ನಾಭರಣ ನಕಲಿಯಾಗಿರುವ ಬಗ್ಗೆ ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದು, ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.
ಈ ಸಂಬಂಧ ಬ್ಯಾಂಕಿನ ಹಿರಿಯ ಅಧಿಕಾರಿಗಳು ಬ್ಯಾಂಕ್ ಗೆ ಆಗಮಿಸಿ ಲಾಕರ್‌ನಲ್ಲಿದ್ದ ಗ್ರಾಹಕರ ಚಿನ್ನವನ್ನು ಪರೀಕ್ಷಿಸಿ ನೋಡಿದಾಗ ಅದೆಲ್ಲವೂ ನಕಲಿಯಾಗಿರುವುದು ಗೊತ್ತಾಗಿದೆ. ಆದರೆ ಮೊದಲಿಗೆ ಬ್ಯಾಂಕ್ ನಲ್ಲಿ 1989ರಿಂದ ಚಿನ್ನ ಪರೀಕ್ಷಕರಾಗಿ(ಅಪ್ರೈಸರ್)ಕರ್ತವ್ಯ ನಿರ್ವಹಿಸುತ್ತಿರುವ ರಾಜಣ್ಣ ಎಂಬುವರ ಮೇಲೆ ಅನುಮಾನ ಬಂದು ಅವರನ್ನು ವಿಚಾರಣೆ ನಡೆಸಲಾಗಿದ್ದು ಅವರು ತಮಗೇನು ಗೊತ್ತಿಲ್ಲ. ಮ್ಯಾನೇಜರ್ ಮುಂದೆಯೇ ಪರೀಕ್ಷೆ ಮಾಡಿದ್ದು ಅವುಗಳೆಲ್ಲವೂ ಅಸಲಿ ಚಿನ್ನವೇ ಆಗಿದ್ದವು ಎಂಬುದಾಗಿ ಹೇಳಿದ್ದರು.
ಈ ಸಂಬಂಧ ಕೆನರಾ ಬ್ಯಾಂಕ್‌ನ ಮಂಡ್ಯದ ಪ್ರಾದೇಶಿಕ ಕಚೇರಿಯ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ರಮಾಕಾಂತರಾವ್ ಅವರು ರಾಜಣ್ಣನೇ ಮೋಸ ಮಾಡಿದ್ದಾರೆಂದು ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಬ್ಯಾಂಕ್ ಮ್ಯಾನೇಜರ್ ಅನಂತನಾಗ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಲು ತಾನು ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಅನಂತನಾಗ್ ಅವರು ಸುಮಾರು 2 ಕೋಟಿ 12 ಲಕ್ಷ ರೂ ಮೌಲ್ಯದ 4 ಕೆ.ಜಿ 708 ಗ್ರಾಂ ತೂಕದ ಚಿನ್ನಾಭರಣಗಳನ್ನು ತನ್ನ ಕಾರಿನ ಡಿಕ್ಕಿಯಲ್ಲೇ ಇಟ್ಟುಕೊಂಡು ತಿರುಗುತ್ತಿದ್ದದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಪೊಲೀಸರು ವಶಕ್ಕೆ ಪಡೆದ ಆರೋಪಿಗಳಿಂದ ಚಿನ್ನ ಮಾರಾಟ ಮಾಡಿ ಬಂದಿದ್ದ 23 ಲಕ್ಷ ರೂ ನಗದು ಹಾಗೂ ಬ್ಯಾಂಕ್‌ನಲ್ಲಿದ್ದ 9.5 ಕೆ.ಜಿ ನಕಲಿ ಚಿನ್ನ, ಕೃತ್ಯಕ್ಕೆ ಮ್ಯಾನೇಜರ್ ಬಳಸಿದ ಕಾರು ಮತ್ತು ಮಂಡ್ಯದ ಮತ್ತೊಬ್ಬ ಆರೋಪಿ ರಜನೀಶ್ ಬಳಸಿದ್ದ ನ್ಯಾನೋ ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.