ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಬಂದಿದೆ. ಕೊರೊನಾದ ನಡುವೆಯೂ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಗನಿಗೆ ಹಾಲೆರೆದು ಒಳಿತು ಮಾಡುವಂತೆ ಬೇಡಿಕೊಳ್ಳಲಾಗುತ್ತಿದೆ. ಪ್ರತಿ ಸ್ತ್ರೀ ತನ್ನ ಸಹೋದರನಿಗೆ ಒಳಿತಾಗಲೀ ಆತನಿಗೆ ರಕ್ಷಣೆ ಸಿಗಲಿ ಎಂದು ಬೇಡುವ ಹಬ್ಬ ಇದಾಗಿದೆ.
ನಾಗರಪಂಚಮಿ ಹಬ್ಬವು ಹಲವು ಮಹತ್ವವನ್ನು ಹೊಂದಿದ ಹಬ್ಬವಾಗಿದ್ದು, ಮೇಲ್ನೋಟಕ್ಕೆ ಮಡಿಯನ್ನುಟ್ಟು ಹೆಣ್ಮಕ್ಕಳು ಹುತ್ತಕ್ಕೆ ತನಿ ಎರೆಯುವುದು ಕಂಡು ಬಂದರೂ ಅದರ ಹಿಂದೆ ಹಲವು ರೀತಿಯ ಮಹತ್ವವಿರುವುದು ಗೋಚರಿಸುತ್ತದೆ. ಈ ಹಬ್ಬದ ಆಚರಣೆ ಇಂದು ನಿನ್ನೆಯದಾಗಿರದೆ ಪೌರಾಣಿಕ ಹಿನ್ನಲೆ ಇರುವುದನ್ನು ನಾವು ಕಾಣಬಹುದಾಗಿದೆ. ಈ ಹಬ್ಬದ ಕುರಿತಂತೆ ತಿಳಿಯುತ್ತಾ ಹೋದರೆ ಪೌರಾಣಿಕ ಹಿನ್ನಲೆ ಕಥೆಯೊಂದು ತೆರೆದುಕೊಳ್ಳುತ್ತದೆ. ಅದು ಏನೆಂದರೆ?
ಹಿಂದಿನ ಕಾಲದಲ್ಲಿ ನಾಗರಪಂಚಮಿಯಂದು ನಾಲ್ವರು ಅಣ್ಣಂದಿಯರನ್ನು ಹೊಂದಿದ್ದ ತಂಗಿಯೊಬ್ಬಳು ಮನೆಯವರೊಂದಿಗೆ ಸೇರಿ ಪೂಜೆಯನ್ನು ಹಮ್ಮಿಕೊಂಡಿರುತ್ತಾರೆ. ಈ ವೇಳೆ ನಾಗರಹಾವೊಂದು ಆ ನಾಲ್ವರು ಅಣ್ಣಂದಿರನ್ನು ಕೊಂದು ಹಾಕುತ್ತದೆ. ಈ ವೇಳೆ ಅಣ್ಣಂದಿಯರನ್ನು ಕಳೆದುಕೊಂಡ ತಂಗಿಯು ಕಣ್ಣೀರಿಡುತ್ತಾ ನಾಗರಹಾವನ್ನು ಅಣ್ಣಂದಿರನ್ನು ಬದುಕಿಸಿಕೊಡುವಂತೆ ಬೇಡಿಕೊಳ್ಳುತ್ತಾಳೆ. ಅಷ್ಟೇ ಅಲ್ಲದೆ ನಾಲ್ವರಲ್ಲಿ ಒಬ್ಬನನ್ನಾದರೂ ಬದುಕಿಸಿ ಕೊಡುವಂತೆಯೂ ಮೊರೆಯಿಡುತ್ತಾಳೆ. ಆಕೆಯ ಮಾತಿಗೆ ಕರಗಿದ ನಾಗ ನಾಲ್ವರಲ್ಲಿ ಒಬ್ಬನನ್ನು ಬದುಕಿಸಿಕೊಡುತ್ತದೆ. ಆ ನಂತರ ಅಣ್ಣ ತಂಗಿ ಇಬ್ಬರು ಸೇರಿ ನಾಗರಪಂಚಮಿಯನ್ನು ಆಚರಿಸಿದರು ಎಂದು ಹೇಳಲಾಗಿದೆ.
ಇನ್ನು ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಹೆಣ್ಮಗಳು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ ಎಂಬ ನಂಬಿಕೆಯಿದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ಮಾಡುವುದಾಗಿ ವಚನ ನೀಡಿದನು ಎನ್ನಲಾಗಿದ್ದು ಹೀಗಾಗಿಯೇ ಸಹೋದರನ ಆಯಸ್ಸು, ಆರೋಗ್ಯ, ರಕ್ಷಣೆಗಾಗಿ ಉಪವಾಸವಿದ್ದು, ನಾಗರಪಂಚಮಿಯನ್ನು ಆಚರಿಸಲಾಗುತ್ತದೆ.