ಮೈಸೂರು: ಭಾರತದಲ್ಲಿ ಮೆಟ್ರೊ ನಿಯೋ ಕಾರಿಡಾರ್ ಹೊಂದಿರುವ ಶ್ರೇಣಿ-2 ನಗರಗಳಲ್ಲಿ ಅರಮನೆ ನಗರಿ ಮೈಸೂರು ಒಂದಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ನಾಸಿಕ್ ಮಾದರಿಯಲ್ಲಿಯೇ ಮೈಸೂರಿನಲ್ಲೂ ಮೆಟ್ರೊ ಟ್ರೈನು ಸಂಚರಿಸಲಿದೆ.
ಮೆಟ್ರೊ ನಿಯೋ ಯೋಜನೆ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಮನದಲ್ಲಿಟ್ಟುಕೊಂಡು ಕಾರ್ಯಸಾಧ್ಯತೆ ಅಧ್ಯಯನ ನಡೆಸಲು ಮುಂದಾಗಿದೆ. ಅಧ್ಯಯನಕ್ಕೆ ನಗರ ಪಾಲಿಕೆ ಸಹಕಾರ ಪಡೆಯಲಿದೆ.
ಮುಂದಿನ 50 ಮತ್ತು 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಿಯೋ ಮೇಟ್ರೊ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಯಲಿದೆ. ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್‌ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಧ್ಯಯನ ಸಂಬಂಧ ಚರ್ಚೆ ನಡೆಯಲಿದೆ.
ಮೈಸೂರು ಬೆಳೆಯುತ್ತಿರುವ ನಗರ. ಕೈಗಾರಿಕೆಗಳು, ಐಟಿಬಿಟಿ ಬೆಳೆಯುತ್ತಿದೆ. ಬಡಾವಣೆಗಳು ಹೆಚ್ಚಾಗುತ್ತಿವೆ. ರಸ್ತೆಗಳು ಕಿರಿದಾಗುತ್ತಿದ್ದು, ಮುಂಬರುವ ದಿನಗಳಲ್ಲಿ ವಾಹನ ಸಂಚಾರ ಕಷ್ಟವಾಗಲಿದೆ. ಭವಿಷ್ಯದ ದೃಷ್ಟಿಯಿಂದ ಮೆಟ್ರೊ ನಿಯೋ ಯೋಜನೆ ಸಮಗ್ರ ವರದಿ ಸಿದ್ಧವಾದ ಬಳಿಕ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವುದಾಗಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದ್ದಾರೆ.
ಮೆಟ್ರೊ ನಿಯೋ ಬೃಹತ್ ಪ್ರಾಜೆಕ್ಟ್. ಸಾವಿರಾರು ಕೋಟಿ ವೆಚ್ಚವಾಗುತ್ತದೆ. ಅತಿ ಕಡಿಮೆ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಯೋಜನೆಗೆ ಜಾರಿಗೆ ಚಿಂತನೆ ನಡೆಸಲಾಗಿದೆ. ಇಂದು ನಡೆಯುವ ಸಭೆಯಲ್ಲಿ ನುರಿತ ತಜ್ಞರ ಸಮಿತಿ ರಚನೆ ಸಂಬಂಧ ಸಭೆಯಲ್ಲಿಡಲಾಗುತ್ತದೆ. ತಜ್ಞರು ನೀಡಿದ ವರದಿಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಕಳೆದ ಬಜೆಟ್ ಭಾಷಣದಲ್ಲಿ ವಿತ್ತೆ ಸಚಿವ ನಿರ್ಮಲಾ ಸೀತಾರಾಮನ್ ಅವರು ಮೆಟ್ರೊ ನಿಯೋ ಟೆಕ್ನಾಲಜೀಸ್ ಅನ್ನು ಬೆಳೆಯುತ್ತಿರುವ ನಗರಗಳಲ್ಲಿ ಕಡಿಮೆ ವೆಚ್ಚದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದರು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಭಾರತದ ಮೊದಲ ಮೆಟ್ರೊ ನಿಯೊ ಯೋಜನೆ ಜಾರಿಗೆ ಬಂದಿತು. ಕೇಂದ್ರ ಸರ್ಕಾರದ ಅನುದಾನದಲ್ಲಿ ಚೆನ್ನೈ, ಕೊಚ್ಚಿ, ಬೆಂಗಳೂರು, ನಾಗಪುರದಲ್ಲಿ ಮೆಟ್ರೊ ರೈಲು ಸೇವೆ ಕಲ್ಪಿಸಲಾಗಿದೆ. ಮೈಸೂರಿಗೂ ಮೆಟ್ರೊ ನಿಯೋ ಯೋಜನೆ ಅಗತ್ಯವಾಗಿದೆ ಎಂದು ಎಚ್.ಜಿ.ರಾಜೀವ್ ತಿಳಿಸಿದರು.
ಮೆಟ್ರೊ ನಿಯೋ ಸಾಮೂಹಿಕ ಕ್ಷೀಪ್ರ ಸಂಚಾರ ವ್ಯವಸ್ಥೆ. ಸುಸಜ್ಜಿತ, ಆರಾಮದಾಯಕ, ಇಂಧನ ದಕ್ಷತೆಯಿಂದ ಕೂಡಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಮಹರಾಷ್ಟ್ರದ ನಾಸಿಕ್‌ನಲ್ಲಿ ಯೋಜನೆ ಜಾರಿಗೆ ಬಂದಿದೆ. ಅದೇ ಮಾದರಿಯಲ್ಲಿ ಮೈಸೂರಿನಲ್ಲೂ ಯೋಜನೆಗೆ ಜಾರಿಗೆ ಚಿಂತನೆ ನಡೆದಿದೆ. ಮುಡಾ ಸಭೆಯಲ್ಲಿ ಒಪ್ಪಿಗೆ ಪಡೆದು ಡಿಪಿಆರ್ ರಚಿಸಲು ತಂಡ ರಚಿಸುತ್ತೇವೆ.
-ಎಚ್.ವಿ.ರಾಜೀವ್, ಅಧ್ಯಕ್ಷರು, ಮುಡಾ