ಮೈಸೂರು: ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ರೈತನ ಪುತ್ರಿ ಸ್ನಾತಕೋತ್ತರ ಪದವಿಯಲ್ಲಿ 10 ಚಿನ್ನದ ಪದಕ, ನಾಲ್ಕು ನಗದು ಬಹುಮಾನ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ.
ರೈತರಾದ ಟಿ.ಎಂ.ಶಿವಮಲ್ಲಪ್ಪ ಮತ್ತು ನೀಲಾಂಬಿಕಾ ದಂಪತಿ ನಾಲ್ಕನೇ ಪುತ್ರಿಯಾದ ಟಿ.ಎಸ್.ಮಾದಲಾಂಬಿಕೆ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕಿನೊಂದಿಗೆ ಕನ್ನಡ ಎಂಎ ಪದವಿ ಪಡೆದಿದ್ದಾರೆ. ಕನಿಷ್ಠ ಸೌಲಭ್ಯವೂ ಇಲ್ಲದ ಕುಗ್ರಾಮದವರಾದ ಮಾದಲಾಂಬಿಕೆ ಶೈಕ್ಷಣಿಕ ವಲಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಚಾಮರಾಜನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿ ಅತ್ಯುನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾದ ಮಾದಲಾಂಬಿಕೆ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂಎಗೆ ಸೇರಿದರು. ಅಲ್ಲಿ ದೊರೆತ ಉತ್ತಮ ಶಿಕ್ಷಣದಿಂದ ಶೇ. 8.8 ಅಂಕ ಪಡೆದು ಪ್ರಥಮ ರ್‍ಯಾಂಕಿನೊಂದಿಗೆ ತೇರ್ಗಡೆಯಾದರು. ಬಿಎ ಶೇ. 80 ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಕೃಷಿಕರಾದ ತಂದೆ 8ನೇ ತರಗತಿ ಓದಿದ್ದರು. ಪ್ರತಿ ಪರೀಕ್ಷೆಯಲ್ಲೂ ತನಗೆ ಇಷ್ಟೇ ಅಂಕ ಬರುತ್ತದೆಂದು ಹೇಳುತ್ತಿದ್ದರು. ಒಮ್ಮೆ ಪಕ್ಕದೂರಿನ ವಿದ್ಯಾರ್ಥಿಗೆ ಚಿನ್ನದ ಪದಕ ಬಂದಿದ್ದಕ್ಕೆ ತುಂಬಾ ಖುಷಿ ಪಟ್ಟಿದ್ದರು. ಈಗ ನನಗೆ 10 ಚಿನ್ನದ ಪದಕ ಬಂದಿವೆ. ಈ ಸಂಭ್ರಮ ಕಾಣಲು ಅವರೇ ಇಲ್ಲ’ ಎಂದು ಮಾದಲಾಂಬಿಕೆ ನೊಂದುಕೊಂಡರು.
ಎಂಎ ಪ್ರಥಮ ಸೆಮಿಸ್ಟರ್ ಪರೀಕ್ಷೆ ಶುಲ್ಕ ಪಾವತಿಸಿದ ದಿನವೇ ಅಪ್ಪ ಅಕಾಲಿಕವಾಗಿ ನಿಧನರಾದರು. ಕುಟುಂಬದ ಆಧಾರಸ್ತಂಭವೇ ಕಳಚಿತು. ನಾಲ್ವರು ಹೆಣ್ಣು ಮಕ್ಕಳು. ನಾನೇ ಕೊನೇಯವಳು. ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಆದರೆ, ತಾಯಿ, ಶಿಕ್ಷಕಿಯಾದ ಅಕ್ಕ ರಾಜೇಶ್ವರಿ ಉನ್ನತ ಶಿಕ್ಷಣ ಪಡೆಯಲು ನೆರವಾದರು.
ಗುರುಗಳಾದ ಡಾ.ಕೃಷ್ಣಮೂರ್ತಿ ಹನೂರು ಅವರ ಪಾಠ ಕೇಳುವ ಅವಕಾಶ ದೊರೆತದ್ದು ಜೀವನವನ್ನು ಬದಲಾಯಿಸಿತು. ಇನ್ನೊಬ್ಬ ಗುರುಗಳಾದ ಡಾ.ಕುಪ್ನಳ್ಳಿ ಎಂ.ಭೈರಪ್ಪ ಅವರು ಸ್ಫೂರ್ತಿ ತುಂಬಿದರು. ಕನ್ನಡ ಕೇಂದ್ರದ ಎಲ್ಲ ಗುರುಗಳು ತನ್ನ ಸಾಧನೆಗೆ ಕಾರಣರಾಗಿದ್ದಾರೆ ಎಂದು ಸ್ಮರಿಸುತ್ತಾರೆ.
ಜಮೀನು ಗುತ್ತಿಗೆ ಕೊಟ್ಟಿ ವೆ. ತಾಯಿ ಮನೆಯಲ್ಲಿದ್ದಾರೆ. ಅವರ ಜವಾಬ್ದಾರಿ ನನ್ನ ಮೇಲಿದೆ. ಈಗ ಉದ್ಯೋಗ ಹುಡುಕುತ್ತಿದ್ದೆನೆ. ಎನ್‌ಇಟಿ ಪರೀಕ್ಷೆ ಪಾಸು ಮಾಡಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುವ ಗುರಿ ಹೊಂದಿರುವೆ. ಮೈಸೂರು ವಿವಿ 101ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕಾರ ಮಾಡುತ್ತಿರುವುದು ನನ್ನ ಜೀವನದ ಅವಿಸ್ಮರಣೀಯ ಗಳಿಗೆಯಾಗಿ ಉಳಿಯಲಿದೆ ಎಂದು ಮಾದಲಾಂಬಿಕೆ ಹೆಮ್ಮೆಪಟ್ಟರು.

ಗುರುವೃಂದಕ್ಕೆ ಸಾಧನೆ ಶ್ರೇಯಸ್ಸು
ಒಂದು ಗೋಲ್ಡ್ ಮೆಡಲ್ ಬರಬಹುದೆಂದು ಅಂದಾಜಿಸಿz. ಆದರೆ 10 ಚಿನ್ನದ ಪದಕಗಳು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಜತೆಗೆ ನಾಲ್ಕು ನಗದು ಬಹುಮಾನ ಬಂದಿರುವುದು ಅತ್ಯಂತ ಖುಷಿಯಾಗಿದೆ. ಇದರ ಪೂರ್ಣ ಶ್ರೇಯಸ್ಸು ಗುರುವೃಂದಕ್ಕೆ ಸಲ್ಲಬೇಕು.
-ಟಿ.ಎಸ್.ಮಾದಲಾಂಬಿಕೆ, ವಿದ್ಯಾರ್ಥಿನಿ