ಕೋವಿಡ್‌ ಹೆಚ್ಚಳಕ್ಕೆ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳು ಕಾರಣ: ಮಾಲವಿಕ ಗುಬ್ಬಿವಾಣಿ

ಜನಸಾಮಾನ್ಯರು ಹೈರಾಣಾಗುವಂತೆ ನಿರ್ಬಂಧಗಳನ್ನು ವಿಧಿಸಿದರೂ ಕೋವಿಡ್‌ ನಿಯಂತ್ರಣಕ್ಕೆ ಬಾರದಿರುವುದಕ್ಕೆ ರಾಜ್ಯ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ ಎಂದು ಆಮ್‌ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾಧ್ಯಕ್ಷರಾದ ಮಾಲವಿಕ ಗುಬ್ಬಿವಾಣಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಯ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆ ಬುಧವಾರ 562 ತಲುಪಿದ ಕುರಿತು ಪ್ರತಿಕ್ರಿಯಿಸಿದ ಮಾಲವಿಕ ಗುಬ್ಬಿವಾಣಿ, “ಸಭೆ ಸಮಾರಂಭಗಳಿಗೆ ವಾರಾಂತ್ಯ ಮಾತ್ರ ನಿರ್ಬಂಧ ವಿಧಿಸಿ, ಬೇರೆ ದಿನಗಳಲ್ಲಿ 200 ಜನರು ಒಂದೆಡೆ ಸೇರಲು ಆಸ್ಪದ ನೀಡಲಾಗಿದೆ. ವಾರದ ದಿನಗಳ ಜನಸಂದಣಿಯಲ್ಲಿ ಸೋಂಕು ಹರಡುವುದಿಲ್ಲವೇ? ಸೋಂಕು ನಿಯಂತ್ರಣಕ್ಕೆ ಬರುವ ತನಕ ಯಾವುದೇ ಸಭೆ ಸಮಾರಂಭಗಳಿಗೆ ಯಾವುದೇ ದಿನದಂದು ಸರ್ಕಾರ ಅವಕಾಶ ನೀಡಬಾರದು. ರಾತ್ರಿ ಕರ್ಫ್ಯೂಯಿಂದ ಏನು ಉಪಯೋಗವಾಗುತ್ತಿದೆ? ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಅವೈಜ್ಞಾನಿಕವೆಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಕಾರ್ಯಕ್ರಮಗಳು ಹಾಗೂ ರಾಜಕೀಯ ಸಮಾರಂಭಗಳಲ್ಲಿ ಜನಸಂದಣಿಗೆ ಅವಕಾಶ ನೀಡುತ್ತಿರುವುದರಿಂದ ನಿರ್ಬಂಧಗಳ ಉದ್ದೇಶವೇ ಹಾಳಾಗುತ್ತಿದೆ. ಸಾಮಾನ್ಯ ಜನರು ಅನಗತ್ಯವಾಗಿ ಆರ್ಥಿಕ ಹೊಡೆತಕ್ಕೆ ಸಿಲುಕುತ್ತಿದ್ದಾರೆ. ನಿಯಮಗಳು ವೈಜ್ಞಾನಿಕವಾಗಿದ್ದರೆ ಮಾತ್ರ ಜನರು ಅದನ್ನು ಪಾಲಿಸುತ್ತಾರೆ” ಎಂದು ಹೇಳಿದರು.

“ವಾರಾಂತ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಹಾಕಿರುವುದರಿಂದ ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವರಿಗೆ ವಾರಾಂತ್ಯದ ದುಡಿಮೆಯೇ ಜೀವನಕ್ಕೆ ಆಧಾರ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮಾಸ್ಕ್‌, ಸ್ಯಾನಿಟೈಜರ್‌ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯಗೊಳಿಸಿ, ವಾರಾಂತ್ಯ ಕೂಡ ವಹಿವಾಟಿಗೆ ಅವಕಾಶ ನೀಡಬೇಕು” ಎಂದು ಮಾಲವಿಕ ಗುಬ್ಬಿವಾಣಿ ಆಗ್ರಹಿಸಿದರು.

ಸರ್ಕಾರದ ನಿರ್ಬಂಧಗಳನ್ನು ಸಾಮಾನ್ಯ ಜನರು ಸ್ವಲ್ಪ ಉಲ್ಲಂಘಿಸಿದರೂ ದಂಡ ವಿಧಿಸಲಾಗುತ್ತಿದೆ ಅಥವಾ ಲಾಠಿ ಏಟು ನೀಡಲಾಗುತ್ತಿದೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಾರಾಂತ್ಯದಲ್ಲಿ ಜನರನ್ನು ಸೇರಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ರೇಣುಕಾಚಾರ್ಯ ಮುಂತಾದವರು ದೊಡ್ಡ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿದಾಗ ಪೊಲೀಸರು ಕೇವಲ ಕೇಸು ದಾಖಲಿಸಿಕೊಂಡು ಸುಮ್ಮನಾಗುತ್ತಾರೆ. ಅವರನ್ನು ಬಂಧಿಸುವುದಿಲ್ಲ ಹಾಗೂ ಅವರ ಮೇಲೆ ಲಾಠಿ ಎತ್ತುವುದಿಲ್ಲವೇಕೆ? ಸಾಮಾನ್ಯರಿಗೇ ಒಂದು ಕಾನೂನು, ಪ್ರಭಾವಿಗಳಿಗೇ ಒಂದು ಕಾನೂನು ಮಾಡಲಾಗಿದೆಯೇ?” ಎಂದು ಮಾಲವಿಕ ಗುಬ್ಬಿವಾಣಿ ಪ್ರಶ್ನಿಸಿದರು.