ಮೈಸೂರು :- ಇಂದಿನ ರಾಜಕೀಯ ಪರಿಸ್ಥಿತಿ ಹೇಗಾಗಿದೆ ಎಂದರೆ ನೋಡುವವರು ಛೀ, ಥ, ಅಂತಾ ಉಗಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. 40% ವಿರುದ್ಧ ಹೊರಾಟ ಮಾಡಿದ್ದಕ್ಕೆ ಕಾಂಗ್ರೆಸ್ಸಿಗೆ ಮತ ಹಾಕಿದರು. ಇವರು ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣ ನಡೆಸಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನವರು ಹೋರಾಟ ಮಾಡುತ್ತಿದ್ದಾರೆ. ಅಂದರೆ ಇವರು ಮಾಡುತ್ತಿರುವುದು ದೊಂಬರಾಟವಲ್ಲವೇ. ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸವಲ್ಲವೇ? ಇದನ್ನು ನೋಡುತ್ತಾ ಜನರು ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು.

ಇದು ಇವರ ಉದ್ದೇಶ. ಕೆಲಸದ ಬಗ್ಗೆ, ಪ್ರವಾಹ ಪೀಡಿತ ಜನರ ಬಗ್ಗೆ, ರೈತರ ಬೆಳೆ ನಾಶವಾದ ಕುರಿತು, ಸಾಂಕ್ರಾಮಿಕ ರೋಗದ ಬಗ್ಗೆ, ಸುಸಜ್ಜಿತವಾದ ಆಸ್ಪತ್ರೆ ಬಗ್ಗೆ, ಶಾಲೆಗಳ ಬಗ್ಗೆ, ವಿದ್ಯುತ್ ಕಂಬಗಳು ಬಿದ್ದು ಹೋಗಿರುವ ಬಗ್ಗೆ, ಯಾವ ರಾಜಕಾರಣಿಯೂ ಧ್ವನಿ ಎತ್ತುವುದಿಲ್ಲ. ಇದಕ್ಕೇನಾ ನಿಮ್ಮನ್ನು ಜನರು ಮತ ಹಾಕಿ ಗೆಲ್ಲಿಸಿದ್ದು, ಇಬ್ಬರೂ ಕಚ್ಚಾಡುತ್ತ ಜನರ ಕಿವಿ ಮೇಲೆ ಹೂ ಇಡುತ್ತಿದ್ದೀರಿ. ನಾಚಿಕೆ ಆಗಬೇಕು ನಿಮಗೆ, ವರ್ಗಾವಣೆ ಮಾಡಿಸು ದುಡ್ಡು ತಿನ್ನು, ಅಭಿವೃದ್ಧಿಗೆ ಅಂತಾ ಹಣ ಬಿಡುಗಡೆ ಮಾಡಿಸಿಕೊ ಕಮಿಷನ್ ತಿನ್ನು. ಇದೇ ನೀವುಗಳು ಮಾಡುತ್ತಿರುವ ಕೆಲಸ. ಜನರೂ ಅಷ್ಟೇ, ಚುನಾವಣೆ ಬಂದಾಗ ಯಾವ ಜಾತಿಯವನು ನಿಂತಿದ್ದಾನೆ. ಎಷ್ಟು ಹಣ ಕೊಡ್ತಾನೆ. ಇದೇ ಅವರ ಮತ ಗಳಿಕೆಯ ಸೂತ್ರ. ಪ್ರಾಮಾಣಿಕರು ನಿಂತರೆ ಅವರಿಗೆ 10 ಮತಗಳೂ ಸಿಗುವುದಿಲ್ಲ. ವ್ಯಾಪಾರಸ್ಥರು ರಾಜಕಾರಣಕ್ಕೆ ಬಂದರೆ ಅವನು ವ್ಯಾಪಾರ ದೃಷ್ಟಿ ಹೊಂದಿರುತ್ತಾನೆ. ಸಮಾಜ ಸೇವಕರು ಬಂದರೆ ಸಮಾಜದ ಕಷ್ಟಗಳು ಗೊತ್ತಾಗುತ್ತವೆ. ದುರಂತ ಏನಂದರೆ ವ್ಯಾಪಾರ ಮನೋಭಾವದವರು ಜಾಸ್ತಿ ಆಗುತ್ತಿದ್ದಾರೆ. 30 ವರ್ಷಗಳ ಕೆಳಗೆ ಈ ದುಷ್ಟತನದ ರಾಜಕಾರಣ ಇರಲಿಲ್ಲ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಪರ್ಯಾಯ ರಾಜಕೀಯ ಶಕ್ತಿಯನ್ನು ತುಂಬುವುದು ಜನರ ಕೈಯಲ್ಲಿದೆ. ಜಾತಿ, ಭ್ರಷ್ಟಾಚಾರ ಮತ್ತು ಹಣದ ಬಗ್ಗೆ ತಿರಸ್ಕೃತ ಮನೋಭಾವದಿಂದ ಮತ ಚಲಾಯಿಸಿದರೆ ಮಾತ್ರ ಇದು ಸಾಧ್ಯ ಎಂದು ಆಮ್ ಆದ್ಮ ಪಕ್ಷದ ಜಿಲ್ಲಾಧ್ಯಕ್ಷರಾದ ರಂಗಯ್ಯ ಅವರ ಸ್ಪಷ್ಟ ಅಭಿಪ್ರಾಯ.