ಮಂಡ್ಯ: ಮೋದಿ ಯುವಕರ ಉದ್ಯೋಗ ಕಿತ್ತು ಬೀದಿಗೆ ನಿಲ್ಲಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಪಾರ್ಕ್ ಮೈದಾನದಲ್ಲಿ ತಾಲೂಕು ಕಾಂಗ್ರೆಸ್ ಪಕ್ಷ ಕೊರೊನಾ ವಾರಿಯರ್ಸ್ ಗಳಿಗೆ ಆಯೋಜಿಸಿದ್ದ ಫುಡ್‌ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಜನರ ಜೀವ ರಕ್ಷಣೆ ಸೇರಿದಂತೆ ಬೆಲೆ ಏರಿಕೆಯ ಮೂಲಕ ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಬ್ಬರೂ ಅಧಿಕಾರದಲ್ಲಿ ಮುನ್ನಡೆಯ ನೈತಿಕತೆಯನ್ನು ಕಳೆದುಕೊಂಡಿದ್ದಾರೆಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಎಲ್ಲಾ ದೈನಂದಿನ ಜನ ಬಳಕೆಯ ವಸ್ತುಗಳ ಬೆಲೆ ಸದಾ ಏರು ಮುಖದಲ್ಲಿದೆ. ಇದೇನಾ ನಿಮ್ಮ ಅಚ್ಚೇದಿನ್, ಮೋದಿ ನಿಮ್ಮ ಅಚ್ಚೇದಿನ್ ಗೆ ನಾಚಿಕೆಯಾಗಬೇಕೆಂದರು. ಮಾತೆತ್ತಿದರೆ ನನ್ನದು 52 ಇಂಚಿನ ಎದೆ ಎನ್ನುತ್ತಾರೆ ನಮ್ಮ ಮೋದಿ. ಯಾರಿಗೆ ಎಷ್ಟು ಇಂಚಿನ ಎದೆಯಿದ್ದರೇನು. ಅದರಲ್ಲಿ ಕೊಡುವ ಮನಸ್ಸಿರಬೇಕು. ತಮಗೆ ಸಿಕ್ಕ ಅಧಿಕಾರ ಬಳಸಿ ಜನರಿಗೆ ಕೊಡುವ ಮನಸ್ಸು ಮೋದಿ ಮತ್ತು ಯಡಿಯೂರಪ್ಪ ಅವರಿಬ್ಬರಿಗೂ ಇಲ್ಲ ಎಂದ ಸಿದ್ದರಾಮಯ್ಯ ಮಾತೆತ್ತಿದರೆ ನಮ್ಮ ಯಡಿಯೂರಪ್ಪ ನಾನು ರೈತನ ಮಗ ಎನ್ನುತ್ತಾರೆ. ಮಂಡ್ಯದಲ್ಲಿ ನಿಂಬೆಹಣ್ಣು ಮಾರಿದ ನಿಮಗೆ ರೈತರ ಕಷ್ಠಗಳು ನೆನಪಾಗುತ್ತಿಲ್ಲವೇ?. ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ನಾನು ಹೇಳುತ್ತಿಲ್ಲ. ಬದಲಾಗಿ ಬಿಜೆಪಿ ಪಕ್ಷದ ಹೆಚ್.ವಿಶ್ವನಾಥ್, ಅರವಿಂದ ಬೆಲ್ಲದ, ಸಿ.ಪಿ.ಯೋಗೇಶ್ವರ,, ಬಸವನಗೌಡ ಯತ್ನಾಳ್ ಮುಂತಾದವರು ಹೇಳುತ್ತಿದ್ದಾರೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಕೃಷಿ ಭಾಗ್ಯ, ವಿದ್ಯಾಸಿರಿ, ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ, ಮೈತ್ರಿ ಯೋಜನೆ, ಇಂದಿರಾ ಕ್ಯಾಂಟೀನ್ ಸೇರಿದಂತೆ ಎಲ್ಲಾ ಬಡವರ ಯೋಜನೆಗಳನ್ನೂ ಹಳ್ಳಹಿಡಿಸಿದ್ದೀರಿ. ಎರಡು ಬಾರಿ ಮುಖ್ಯಮಂತ್ರಿಯಾದ ನೀವು ಒಮ್ಮೆಯಾದರೂ ರೈತರ ಸಾಲ ಮನ್ನಾ ಮಾಡಿದ್ದೀರಾ? ಎಂದು ಯಡಿಯೂರಪ್ಪ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.
ನೀರಾವರಿ ಇಲಾಖೆಯ 20 ಸಾವಿರ ಕೋಟಿ ಅಭಿವೃದ್ದಿ ಅನುದಾನ ಬಿಡುಗಡೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ 2 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆದಿರುವುದನ್ನು ಬಿಜೆಪಿಗರೇ ಬಹಿರಂಗಪಡಿಸಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿಯಲ್ಲ. ಆದರೂ ಎಲ್ಲ ಉಪ ಚುನಾವಣೆಗಳಲ್ಲೂ ಹಣದ ಪೆಟ್ಟಿಗೆ ಹಿಡಿದು ಬರುತ್ತಿದ್ದಾರೆ. ಈ ಹಣ ಎಲ್ಲಿಂದ ಬರುತ್ತಿದೆ. ಇದರ ಹಿಂದೆ ಅಭಿವೃದ್ದಿ ಹೆಸರಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಪಡೆದ ಕಿಕ್ ಬ್ಯಾಕ್ ವ್ಯವಹಾರ ಕೆಲಸ ಮಾಡುತ್ತಿದೆ. ಅನೈತಿಕ ರಾಜಕಾರಣವನ್ನು ಜನ ವಿರೋಧಿಸಬೇಕು. ಕೊರೊನಾ ಅವಧಿಯಲ್ಲಿ ಉಂಟಾದ ಅಪಾರ ಜೀವ ಹಾನಿಗೆ ಮೋದಿ ಮತ್ತು ಯಡಿಯೂರಪ್ಪ ಅವರೇ ನೇರ ಜವಾಬ್ದಾರರು. ಇದೀಗ 3 ನೇ ಅಲೆ ಬರುತ್ತಿದೆ. ಆಳುವವರು ಈಗಾಲಾದರೂ ಎಚ್ಚೆತ್ತು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳಖನ್ನು ಕೈಗೊಂಡು ನಮ್ಮ ಮಕ್ಕಳ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಆರ್.ಧ್ರ್ರುವನಾರಾಯಣ್, ರಾಜ್ಯ ಸಭೆಯ ಮಾಜಿ ಉಪಾಸಭಾಪತಿ ಕೆ.ರೆಹಮಾನ್ ಖಾನ್, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ರಮೇಶ್‌ಬಂಡಿಸಿದ್ದೇಗೌಡ, ಎನ್.ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾಶ್ರೀಕಾಂತ್, ಮುಖಂಡರಾದ ಎಂ.ಡಿ.ಕೃಷ್ಣಮೂರ್ತಿ, ಚಿನಕುರುಳಿ ರಮೆಶ್, ಪಾಂಡವಪುರ ರೇವಣ್ಣ, ಕೋಡಿಮಾರನಹಳ್ಳಿ ದೇವರಾಜು, ಆದಿಹಳ್ಳಿ ಮೀನಾಕ್ಷಿರಮೇಶ್, ಲಾಯರ್ ನಾಗೇಶ್, ಅಕ್ಕಿ ಮಂಜೇಗೌಡ, ಕೆ.ಆರ್.ರವೀಂದ್ರಬಾಬೂ, ಡಿ.ಪ್ರೇಮಕುಮಾರ್, ಕೆ.ಸಿ.ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.