ಚಾಮರಾಜನಗರ : ಜಿಲ್ಲೆಯಲ್ಲಿ ಬಳಕೆಯಾಗಿದೆ ಎನ್ನಲಾದ ಸ್ಯಾಟಲೈಟ್ ಫೋನ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸುತ್ತಿದ್ದ ತನಿಖಾ ತಂಡದಲ್ಲಿದ್ದ ಆಂತರಿಕ ಭದ್ರತಾ ಸಿಬ್ಬಂದಿಯೊಬ್ಬರು ಕರ್ತವ್ಯದ ವೇಳೆಯಲ್ಲೇ ಹೃದಯಘಾತದಿಂದ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ಮಲೆಯೂರು ಗ್ರಾಮದ ನಿವಾಸಿ ಬಾಬು ಎಂಬುವರೇ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ದುರ್ದೈವಿ. ಇವರು ಕಳೆದ ಆರು ವರ್ಷಗಳಿಂದ ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸ್ಯಾಟಟೈಲ್ ಮೊಬೈಲ್ ಬಳಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದರು. ಈ ತನಿಖಾ ತಂಡದಲ್ಲಿ ಬಾಬು ಕೂಡ ಇದ್ದರು.
ಈ ನಡುವೆ ಬಾಬು ಅವರಿದ್ದ ತನಿಖಾ ತಂಡವು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗಾಣಿಗಮಂಗಲ ಗ್ರಾಮಕ್ಕೆ ತೆರಳಿ ಪರಿಶೀಲಿಸುತ್ತಿತ್ತು. ಈ ವೇಳೆ ಬಾಬು ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಬಂಡಳ್ಳಿ ಆಸ್ಪತ್ರೆಗೆ ಕರೆದೊಯ್ದು ತೋರಿಸಿದಾಗ ಅಲ್ಲಿನ ವೈದ್ಯರು ಕೂಡಲೇ ಹನೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಹೀಗಾಗಿ ಬಾಬು ಅವರನ್ನು ಬಂಡಳ್ಳಿಯಿಂದ ಹನೂರಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರಾದರೂ ಮಾರ್ಗದ ನಡುವೆ ಸಾವನ್ನಪ್ಪಿದ್ದಾರೆ. ಮೃತ ಬಾಬು ಅವರಿಗೆ ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ವಿವಾಹವಾಗಿತ್ತು.