ಎರಡು ವರ್ಷದ ಬಳಿಕ ಮಹಿಳೆಯ ಕೊಂದ ಹಂತಕನ ಬಂಧನ

ಪಾಂಡವಪುರ: ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ನಡೆದಿದ್ದು, ವಿವಾಹಿತ ಮಹಿಳೆಯನ್ನು ನದಿಗೆ ತಳ್ಳಿ ಕೊಲೆ ಮಾಡಿರುವ ಆರೋಪಿಯನ್ನು ಎರಡು ವರ್ಷದ ಬಳಿಕ ಪಾಂಡವಪುರ ಪೊಲೀಸರು ಬಂಧಿಸಿ ಆತನನ್ನು ಜೈಲಿಗಟ್ಟಿದ್ದಾರೆ.

ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಅಡುಗೆ ಭಟ್ಟ ರಮೇಶ್ ಎಂಬುವವರ ಮಗ ಎಂ.ಆರ್. ರಾಜೇಶ್ ಅಲಿಯಾಸ್ ಕಾಳ ಬಂಧಿತ ಆರೋಪಿ.

ಎರಡು ವರ್ಷದ ಹಿಂದೆ ಈತ ಶ್ರೀರಂಗಪಟ್ಟಣ ತಾಲೂಕು ನೀಲನಕೊಪ್ಪಲು ಗ್ರಾಮದ ಎನ್.ಸಿ.ಮಂಜುನಾಥ್ ಅವರ ಪತ್ನಿ ಎನ್.ಮಂಜು (31) ಎಂಬ ವಿವಾಹಿತ ಮಹಿಳೆಯನ್ನು ಕಾವೇರಿ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಪಾಂಡವಪುರ ಪಟ್ಟಣದ ಹಿರೋಡೆ ಬೀದಿಯಲ್ಲಿರುವ ನಾಗರಾಜು ಅವರ ಮಗಳು ಎನ್.ಮಂಜು ಎಂಬಾಕೆ ಕೊಲೆಯಾದ ಗೃಹಿಣಿ.

ಈಕೆಯನ್ನು ಕಳೆದ 2009ರ ಜೂ.10ರಂದು ಶ್ರೀರಂಗಪಟ್ಟಣ ತಾಲೂಕು ನೀಲನಕೊಪ್ಪಲು ಗ್ರಾಮದ ಎನ್.ಸಿ.ಮಂಜುನಾಥ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಮಕ್ಕಳು ಇರಲಿಲ್ಲ. ಆರೋಪಿ ರಾಜೇಶ್ ಅಲಿಯಾಸ್ ಕಾಳ ಅವರ ದೊಡ್ಡಮ್ಮ ಇದೇ ನೀಲನಕೊಪ್ಪಲು ಗ್ರಾಮದವರಾಗಿದ್ದು, ಈತ ಆಗಾಗ್ಗೆ ನೀಲನಕೊಪ್ಪಲು ಗ್ರಾಮಕ್ಕೆ ಬರುತ್ತಿದ್ದನು. ಈ ಸಂದರ್ಭದಲ್ಲಿ ಈತ ಕೊಲೆಯಾದ ಮಂಜು ಅವಳ ಪರಿಚಯ ಮಾಡಿಕೊಂಡು ಆಕೆಯ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗಿದೆ.

ಕೊಲೆಯಾದ ಮಂಜು ಪಾಂಡವಪುರದ ಹಿರೋಡೆ ಬೀದಿಯಲ್ಲಿರುವ ತನ್ನ ತಂದೆ ಮನೆಯಿಂದ 2019ರ ಜೂ.23ರಂದು ಕಾಣೆಯಾದಳು. ಈ ಬಗ್ಗೆ ತಂದೆ ನಾಗರಾಜು 2019ರ ಜು.3 ರಂದು ಮಂಜು ಕಾಣೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿವಾಹಿತ ಮಹಿಳೆ ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈಕೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಾಜೇಶನ ಚಲನವಲನಗಳ ಮೇಲೆ ನಿಗಾ ಇರಿಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮಂಜು ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಗಿ, ಆಕೆ ತನ್ನ ಮದುವೆಗೆ ಅಡ್ಡಿ ಪಡಿಸಿದ ಕಾರಣ ಶ್ರೀರಂಗಪಟ್ಟಣ ತಾಲೂಕು ಪಶ್ಚಿಮವಾಹಿನಿ ಬಳಿ ಕಾವೇರಿ ನದಿಗೆ ಆಕೆಯನ್ನು ತಳ್ಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆರೋಪಿ ವಿರುದ್ಧ ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುವ ಪಾಂಡವಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *