ಹೆಲ್ತ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಅಂಗಡಿ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಒಬ್ಬ ವ್ಯಕ್ತಿ ಅಗ್ಗಾಗೆ ಅಂಗಡಿಗಳ ಬಳಿ ಬಂದು ಹೆಲ್ತ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಕಾರ್ಪೊರೇಷನ್ ಇಂದ ಪಡೆದಿರುವ ಲೈಸೆನ್ಸನ್ನು ತೋರಿಸುವಂತೆ ಹೇಳಿ ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಮಾಹಿತಿ ಮೇರೆಗೆ ಹೆಲ್ತ್ ಇನ್ಸ್ಪೆಕ್ಟರ್ ಶಿವಪ್ರಸಾದ್ ಅವರು ವ್ಯಕ್ತಿಯ ಚಹರೆ ವಿವರ ಪಡೆದು, ತಮ್ಮ ಸಿಬ್ಬಂದಿಗಳ ಸಹಕಾರದಿಂದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.
ನಕಲಿ ಹೆಲ್ತ್ ಇನ್ಸ್ಪೆಕ್ಟರ್ ಹೆಸರಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಮೈಸೂರಿನ ಕುವೆಂಪು ನಗರದ ವಿವೇಕಾನಂದ ಸರ್ಕಲ್ ನಿವಾಸಿ 61 ವರ್ಷದ ವಿಜಯ ಕುಮಾರ್ ಎಂದು ಗುರುತಿಸಲಾಗಿದೆ.
ಈತನ್ನನ್ನು ಕುವೆಂಪುನಗರದ ವಿವೇಕಾನಂದ ಸರ್ಕಲ್ ಬಳಿ ಪತ್ತೆ ಮಾಡಿ, ಕುವೆಂಪು ನಗರ ಪೊಲೀಸ್ ಠಾಣೆಗೆ ವ್ಯಕ್ತಿಯನ್ನು ಕರೆತಂದು ಹಾಜರುಪಡಿಸಿ ವಿಚಾರಣೆ ನಡೆಸಿದ ವೇಳೆ ಹೆಲ್ತ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಅಂಗಡಿ ಮುಂಗಟ್ಟುಗಳಿಗೆ ಹೋಗಿ ಮಾಲೀಕರನ್ನು ಬೆದರಿಸಿ ಬಲವಂತವಾಗಿ ಅವರಿಂದ ಹಣ ಮತ್ತು ಪದಾರ್ಥಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ.
ಅಲ್ಲದೆ ಹಣ ಕೊಡದೆ ಇದ್ದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರುವುದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ತಪ್ಪೊಪ್ಪಿಕೊಂಡಿರುವ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಸತ್ಯಕ್ಕೆ ಬಳಸಿದ್ದ ಒಂದು ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗಳು ಅಂಗಡಿಗಳಿಗೆ ಬಂದು ಪರವಾನಗಿಯನ್ನು ತೋರಿಸುವಂತೆ ಹೇಳಿ, ಬೆದರಿಸಿ ಹಣ ವಸೂಲಿ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಈ ರೀತಿಯಾಗಿ ಹೇಳಿಕೊಂಡು ಬರುವ ವ್ಯಕ್ತಿಗಳ ಇಲಾಖೆ ಐಡಿ ಕಾರ್ಡ್ ಗಳನ್ನು ಕೇಳುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.