ಮೈಸೂರು: ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ವಂಚನೆಗೆ ಮುಂದಾದ ಪ್ರಕರಣದಲ್ಲಿ ಮಹಿಳೆ ಅರುಣ ಕುಮಾರಿ ಮುಂಚೂಣಿಯಲ್ಲಿದ್ದು, ನಿರ್ಮಾಪಕ ಉಮಾಪತಿ ಆಕೆಯನ್ನು ಮುಂದಿಟ್ಟು ಷಡ್ಯಂತ್ರ ಹೆಣೆದರಾ? ಅಥವಾ ಆಕೆಯೇ ಉಮಾಪತಿಯನ್ನು ಮಿಕಾ ಮಾಡಿದ್ದಳಾ? ಎಂಬಿತ್ಯಾದಿ ಸಂಶಯಗಳು ಈಗ ಎಲ್ಲೆಡೆ ಹರಿದಾಡ ತೊಡಗಿದೆ.
ಇದೀಗ ಬಯಲಾಗಿರುವ ಉಮಾಪತಿ ಮತ್ತು ಅರುಣಕುಮಾರಿ ಅವರ ನಡುವಿನ ವಾಟ್ಸಪ್ ಚಾಟ್ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರಕರಣ ಈಗ ಉಮಾಪತಿ ಅವರ ಸುತ್ತಲೇ ಸುತ್ತುತ್ತಿದೆ. ಈ ಪ್ರಕರಣದಲ್ಲಿ ಎಂಟ್ರಿ ಪಡೆದಿರುವ ಅರುಣಕುಮಾರಿ ಯಾರು? ಎಂಬ ಕುತೂಹಲ ಎಲ್ಲರನ್ನು ಕಾಡತೊಡಗಿದೆ. ಇಷ್ಟಕ್ಕೂ ಆಕೆ ಯಾರು ಎಂಬುದನ್ನು ನೋಡುತ್ತಾ ಹೋದರೆ, ಆಕೆ ಸೋಷಿಯಲ್ ಕ್ಲಬ್ ನಲ್ಲಿ ಸೆಕ್ಯೂರಿಟಿ ಆಗಿರುವ ಕುಮಾರ್ ಎಂಬುವರ ಪತ್ನಿ ಎಂಬುದು ಬೆಳಕಿಗೆ ಬಂದಿದೆ. ಈಕೆ ಆತನೊಂದಿಗೆ ಭಿನ್ನಾಭಿಪ್ರಾಯ ಬಂದಿದ್ದರಿಂದ ಕಳೆದ ಎಂಟು ವರ್ಷದ ಹಿಂದೆಯೇ ವಿಚ್ಚೇದನ ಪಡೆದಿದ್ದಾಳೆ ಎನ್ನಲಾಗಿದೆ.
ಈಕೆಗೆ ಒಬ್ಬ ಮಗನಿದ್ದು, ಈಕೆ ಸೆಕೆಂಡ್ ಪಿಯುಸಿ ಓದಿದ್ದಾಳೆ. ಆದರೆ ತಾನು ಬ್ಯಾಂಕ್ ಮ್ಯಾನೇಜರ್ ಎಂದು. ಅಮಾಯಕರನ್ನು ಯಾಮಾರಿ ಕೆಲಸ ಕೊಡಿರುವುದಾಗಿ ಲಕ್ಷ ಲಕ್ಷ ಪೀಕಿಸುತ್ತಾಳೆ. ಮಧುಕೇಶ್ ಎಂಬಾತನನ್ನು ಮದುವೆಯಾಗುವುದಾಗಿ ನಂಬಿಸಿ ಆತನಿಗೂ 2 ಲಕ್ಷ ರೂಪಾಯಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ. ಇದೀಗ ಆಕೆ ನಿರ್ಮಾಪಕ ಉಮಾಪತಿ ಯೊಂದಿಗೆ ನಡೆಸಿರುವ ಖಾಸಗಿ ಸಂಭಾಷಣೆ ಆಕೆಯ ಉದ್ದೇಶ ಏನೆಂಬುದು ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರೆದರೆ ಅರುಣಕುಮಾರಿ ಅವರ ನಿಜಬಣ್ಣ ಬಯಲಾಗುವುದಂತು ಸತ್ಯ.