ಮೈಸೂರು: ಇತ್ತೀಚೆಗೆ ನಿಧನರಾದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಐವರು ಸದಸ್ಯರ ಕುಟುಂಬದವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕೊಡ ಮಾಡಿದ್ದ ತಲಾ 50 ಸಾವಿರ ರೂ.ಗಳನ್ನು ಪತ್ರಕರ್ತರ ಸಭಾಂಗಣದಲ್ಲಿ ಸೋಮವಾರ ಹಸ್ತಾಂತರಿಸಲಾಯಿತು.
ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೃತ ಪತ್ರಕರ್ತರ ಕುಟುಂಬದವರಿಗೆ ತಲಾ 50 ಸಾವಿರ ರೂ. ನೆರವು ನೀಡುವ ಘೋಷಣೆ ಮಾಡಿ. ಹಣವನ್ನು ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್ ಅವರಿಗೆ ನೀಡಿದ್ದರು.
ಈ ಸಂಬಂಧ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು ಅವರ ಪತ್ನಿ ಮಾಲಾ, ಸುಧರ್ಮ ಪತ್ರಿಕೆಯ ಸಂಪಾದಕ ಕೆ.ವಿ.ಸಂಪತ್ ಕುಮಾರ್ ಅವರ ಪತ್ನಿ ವಿಜಯಲಕ್ಷ್ಮೀ, ತಿ.ನರಸೀಪುರ ಪತ್ರಿಕಾ ವರದಿಗಾರ ಮಂಜುನಾಥ್ ಅವರ ಪತ್ನಿ ಪಾರ್ವತಮ್ಮ, ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಅವರ ಪತ್ನಿ ರಮ್ಯಾ ಅವರಿಗೆ ನೆರವನ್ನು ವಿತರಿಸಲಾಯಿತು.
ಇದೇ ವೇಳೆ ನೇತ್ರರಾಜು ಅವರ ಪತ್ನಿ ಮಾಲಾ ಅವರಿಗೆ ಹಸ್ತಾಂತರ ಮಾಡಿದ 50 ಸಾವಿರ ರೂಪಾಯಿಗಳನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಬಡ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ಅಥವಾ ಆರೋಗ್ಯ ಸುರಕ್ಷಾ ನಿಧಿಗೆ ಬಳಸಿಕೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಅವರಿಗೆ ವಾಪಸ್ ನೀಡಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ,ನಗರ ಕಾರ್ಯದರ್ಶಿ ಪಿ.ರಂಗಸ್ವಾಮಿ ಹಾಜರಿದ್ದರು.