ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ ಸಭಾಪತಿ ಹೊರಟ್ಟಿ

ಬೆಂಗಳೂರು: ಕೋವಿಡ್ ಕೈಗೆ ಸಿಕ್ಕು ಇಡೀ ಜಗತ್ತು ನರಳಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪರಸ್ಪರ ಸಂಪರ್ಕ ಸಂಬಂಧಗಳಿಂದ ದೂರವೇ ಇರಬೇಕಾಗಿ ಬಂದಿರುವ ಅನಿವಾರ್ಯ ಸನ್ನಿವೇಶದಲ್ಲಿಯೂ ಜೀವದ ಹಂಗು ತೊರೆದು ನಾಡಿನ ವಿದ್ಯಾರ್ಥಿಗಳ ಭವಿಷ್ಯದ ಹಿತಕ್ಕಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧವನ್ನು ಕಡಿದು ಹಾಕಿದ ಕ್ರೂರಿ ಕೊರೊನಾ ಹಲವಾರು ಅಮೂಲ್ಯ ಜೀವಗಳನ್ನು ಬಲಿ ಪಡೆದಿದೆ. ಜೊತೆಗೆ ನಮ್ಮ ವೃತ್ತಿ ಭಾಂಧವರಾದ 2000ಕ್ಕೂ ಹೆಚ್ಚು ಶಿಕ್ಷಕರು ಅಸುನೀಗಿದ್ದು ಸಹ ನೋವಿನ ಸಂಗತಿ.

ಇಂತಹ ಆತಂಕ ಭಯದ ಮಧ್ಯೆಯೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾನಸಿಕವಾಗಿ ಸಿದ್ಧಗೊಳಿಸಿ ಪಾಲಕರಿಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹಾಗೂ ಸುರಕ್ಷತೆ ಬಗ್ಗೆ ಭರವಸೆ ನೀಡಿ ಕಳೆದ ಜುಲೈ 19 ಮತ್ತು 22 ರಂದು ಎರಡು ದಿನ ಪರೀಕ್ಷೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿ ಮಾಡುವಲ್ಲಿ ಯಶಸ್ವಿಯಾಗಲು ಕಾರಣೀಭೂತರಾಗಿದ್ದೀರಿ.

ಪರೀಕ್ಷೆ ಎಂದರೇನೆ ಮೊದಲು ಭಯ. ಇನ್ನು ಕೋವಿಡ್ ಸಂಕಷ್ಟ ಕಾಲದಲ್ಲಿ ಇನ್ನಷ್ಟು ಭಯ. ಜೊತೆಗೆ ಕೋವಿಡ್ ಹಲವಾರು ರೀತಿ ಕಾಡಿದ್ದ ಸಂಗತಿಯನ್ನು ನಿತ್ಯ ನೋಡಿದ ಜನತೆ ಭವಿಷ್ಯದಲ್ಲಿ ಎಂದೂ ಮರೆಯಲಾರರು. ಇಡೀ ಜಗತ್ತೇ ಸ್ತಬ್ಧವಾಗಿ ಎಲ್ಲ ವ್ಯವಸ್ಥೆಗಳು ನಿಂತ ಸಂದರ್ಭದಲ್ಲಿ ಪಾಲಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕಳುಹಿಸಲು ಮಾನಸಿಕವಾಗಿ ಸಿದ್ಧರಾಗುವಂತಹ ಸ್ಥಿತಿ ಇದ್ದಂತಹ ಸನ್ನಿವೇಶದಲ್ಲಿಯೂ ಶಿಕ್ಷಕರು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದ್ದ ಭಯದ ವಾತಾವರಣವನ್ನು ತಿಳಿಗೊಳಿಸಿದ ಶಿಕ್ಷಕ ಸಮೂಹದ ಕಾರ್ಯ ಅತ್ಯಂತ ಶ್ಲಾಘನೀಯ.

ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಯಾವುದೇ ರೀತಿಯ ಗೊಂದಲ ಆತಂಕ ಸಮಸ್ಯೆಗಳಿಲ್ಲದೇ ಯಶಸ್ವಿಗೊಳಿಸಿ ದೇಶದಲ್ಲಿಯೇ ಮಾದರಿಯಾದ ರಾಜ್ಯ ಹಾಗೂ ಶಿಕ್ಷಕ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಾಡಿನ ಸಮಸ್ತ ಶಿಕ್ಷಕರಿಗೆ ಹೃದಯ ತುಂಬಿದ ಅಭಿನಂದನೆಗಳು ಹಾಗೂ ಕೃತಜ್ಞತೆಗಳು.

ಎಂದಿನಂತೆ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ ಶಿಕ್ಷಕರು ತಮ್ಮ ಜೀವಭಯದಿಂದ ಹೊರಬಂದು ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ನಾಡಿನ ಹಿತಕ್ಕಾಗಿ, ಕಾರ್ಯ ಮಾಡುವಂತಹ ಭಯಮುಕ್ತ ವಾತಾವರಣ ಮೂಡಲಿ ಎಂಬ ಆಶಾಭಾವ ದೊಂದಿಗೆ ಮತ್ತೊಮ್ಮೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಯಶಸ್ವಿ ಗೊಳಿಸಿದ ಸಮಸ್ತ ಶಿಕ್ಷಕ ಬಂಧುಗಳನ್ನು ಅಭಿನಂದಿಸುವುದಾಗಿ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *