ಚಾಮರಾಜನಗರ: ಬೇಟೆಗೆಂದು ಮಡಿಕೇರಿಯಿಂದ ಚಾಮರಾಜನಗರಕ್ಕೆ ಬಂದಿದ್ದ ಬೇಟೆಗಾರರು ಕಾಡುಪ್ರಾಣಿಗಳ ಬೇಟೆಗೆ ತಯಾರಿ ನಡೆಸುತ್ತಿದ್ದಾಗಲೇ ಬಂದೂಕು ಸಹಿತ ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ಎತ್ತಗಟ್ಟಿ ಸಾಮಾಜಿಕ ಅರಣ್ಯ ಪ್ರದೇಶ ವ್ಯಾಪ್ತಿಯ ವಡ್ಗಲಪುರ ದಹುಂಡಿ ಹೊರವಲಯದಲ್ಲಿ ನಡೆದಿದೆ.
ಮಡಿಕೇರಿ ನಿವಾಸಿಗಳಾದ ಜಿಯೋ ಕಂಪನಿ ಉದ್ಯೋಗಿ ಕಿಶನ್(34), ಕಾರ್ಮಿಕ ಧನಂಜಯ(32), ಪ್ರವಾಸೋದ್ಯಮ ಇಲಾಖೆ ದಿನಗೂಲಿ ನೌಕರ ಆಶಿಕ್(31), ಚಾಲಕ ಪ್ರಮೋದ್(30) ಮತ್ತು ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಹನುಮಯ್ಯ ಅವರ ಪುತ್ರ ಗೋವಿಂದರಾಜು(29) ಬಂಧಿತರು. ಚಾಮರಾಜನಗರದ ನಿವಾಸಿ ಗೋವಿಂದರಾಜುವಿನ ಸಹಕಾರದೊಂದಿಗೆ ಬೇಟೆಯಾಡಲು ಕಿಶನ್, ಧನಂಜಯ, ಆಶಿಕ್ ಮತ್ತು ಪ್ರಮೋದ್ ನಿರ್ಧರಿಸಿದ್ದು, ಅದರಂತೆ ಅವರು ಮಡಿಕೇರಿಯಿಂದ ಎರಡು ಒಂಟಿ ನಳಿಕೆಯ ಬಂದೂಕಿನೊಂದಿಗೆ ಆಗಮಿಸಿ ಐವರು ಸೇರಿ ಚಾಮರಾಜನಗರ ತಾಲೂಕಿನ ಎತ್ತಗಟ್ಟಿ ಸಾಮಾಜಿಕ ಅರಣ್ಯ ಪ್ರದೇಶ ವ್ಯಾಪ್ತಿಯ ವಡ್ಗಲಪುರದಹುಂಡಿ ಹೊರವಲಯದಲ್ಲಿ ಬೇಟೆಯಾಡುವ ತೀರ್ಮಾನ ಮಾಡಿದ್ದರು.
ಈ ವಲಯದಲ್ಲಿ ಕಾಡಂದಿ, ಜಿಂಕೆ, ಕಾಡುಕುರಿಗಳಿದ್ದು ಇವುಗಳನ್ನು ಬೇಟೆಯಾಡುವುದು ಅವರ ಉದ್ದೇಶವಾಗಿತ್ತು. ಹೀಗಾಗಿಯೇ ಅವರು ಸರ್ವ ರೀತಿಯಲ್ಲಿ ತಯಾರಿ ಮಾಡಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಹರ್ಷ ನೇತೃತ್ವದಲ್ಲಿ,ಅರಣ್ಯ ಇಲಾಖೆ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಎರಡು ಒಂಟಿ ನಳಿಕೆಯ ಬಂದೂಕು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.