ಮಡಿಕೇರಿ: ಭುವನಂ ಫೌಂಡೇಷನ್ ವತಿಯಿಂದ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ನೀಡಲಾದ 50 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕಂದಾಯ ಸಚಿವ ಆರ್.ಅಶೋಕ್ ಕೊಡಗು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ.
ಚಿತ್ರನಟ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಭುವನಂ ಫೌಂಡೇಶನ್ ಮೂಲಕ ಕೊರೊನಾ ಸಮಯದಲ್ಲಿ ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಮಾಡಿದ್ದು ಅದರಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯೂ ಒಂದಾಗಿದೆ.
ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕೊಡಗು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಮನರಂಜನಾ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿದ್ದು, ತಮ್ಮ ಸ್ವಂತ ಹಣವನ್ನು ಸಮಾಜಕ್ಕೆ ವ್ಯಯಿಸುತ್ತಿರುವುದು ಮಾದರಿಯಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಮಾನವೀಯತೆ ಅನಾವರಣಗೊಂಡಿದೆ. ಇಂದಿನ ಯುವಕರು ಎತ್ತರದ ಸ್ಥಾನಕ್ಕೆ ಹೋದ ಬಳಿಕ ತಮ್ಮ ಮೂಲವನ್ನು ಮರೆಯುತ್ತಿದ್ದಾರೆ. ಆದರೆ ಭುವನ್ ಪೊನ್ನಣ್ಣ ಅವರು ಸಾಮಾಜಿಕ ಸೇವೆ ಮಾಡುತ್ತಾ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಹುಟ್ಟಿದ ನಾಡನ್ನು ಮರೆಯದೆ ಸಂಕಷ್ಟದ ಸಮಯದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಎಂದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಭುವನ್ ಪೊನ್ನಣ್ಣ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆ ಸಾಧಿಸಲಿ ಎಂದು ಆಶಿಸಿದರು.
ಫೌಂಡೇಷನ್ ಸಂಸ್ಥಾಪಕ ಭುವನ್ ಪೊನ್ನಣ್ಣ ಮಾತನಾಡಿ, 14 ಜಿಲ್ಲೆಗಳ 25 ಸಾವಿರ ಕುಟುಂಬಗಳಿಗೆ ಆಹಾರ ಕಿಟ್, ಔಷಧಿ, ಮಾಸ್ಕ್ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅಭಿಯಾನ ತಂಡ ಮಾಡಿದೆ ಎಂದರು.