ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 4500 ಬಸ್ ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಳಿಗ್ಗೆ 5ರಿಂದ ರಾತ್ರಿ 9ಗಂಟೆಯವರೆಗೆ ನಗರದಲ್ಲಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ನಗರ ಮತ್ತು ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ 4500 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರ ದಟ್ಟಣೆಗನುಗುಣವಾಗಿ ಬಸ್ ಗಳ ಸಂಖ್ಯೆ ಹೆಚ್ಚಿಸಲು ಬಿಎಂಟಿಸಿ ತೀರ್ಮಾನಿಸಿದೆ. ಅಲ್ಲದೆ, ಡಿಜಿಟಲ್ ಟಿಕೆಟಿಂಗ್ (QR code based) ವ್ಯವಸ್ಥೆಯನ್ನು ಎಲ್ಲ ಬಸ್ಸುಗಳಲ್ಲಿ ಒದಸಲಾಗಿದೆ.
ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಚಾಲನಾ ಸಿಬ್ಬಂದಿಗಳು ಮುಖಗವಸು (Face mask) ನ್ನು ಕಡ್ಡಾಯವಾಗಿ ಧರಿಸುವುದು. ಚಾಲನಾ ಸಿಬ್ಬಂದಿ ಆಗಿಂದಾಗ್ಗೆ ಸ್ಯಾನಿಟೈಸರ್ ಬಳಸಿ, ಶುಚಿತ್ವವನ್ನು ಕಾಪಾಡುವುದು, ಬಸ್ಸುಗಳಲ್ಲಿ ಒಟ್ಟು ಆಸನಗಳ ಸಾಮರ್ಥ್ಯ ದಷ್ಟು ಪ್ರಯಾಣಿಕರನ್ನು ಪ್ರಯಾಣಿಸಲು ಅನುಮತಿಸುವುದು. ನಿಗಧಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು,ಇಳಿಸುವುದು ಸಿಬ್ಬಂದಿಗಳ ಜವಬ್ದಾರಿಯಾಗಿದೆ.
ಇನ್ನು ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಕಡ್ಡಾಯವಾಗಿ ಮುಖಗವಸು (Face mask) ನ್ನು ಧರಿಸುವುದು, ಮುಖಗವಸು (Face mask) ಧರಿಸದ ಪ್ರಯಾಣಿಕರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಯಾವದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ (Queue system) ಬಸ್ಸನ್ನು ಹತ್ತುವುದು, ಇಳಿಯುವುದು ಮಾಡಬೇಕು.
ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ, ಬಸ್ಸನ್ನು ಹತ್ತಬಾರದು. ಮುಂದಿನ ಬಸ್ಸಿಗಾಗಿ ಕಾಯುವುದು. ಜ್ವರ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು ಎಂದು ಬಿಎಂಟಿಸಿ ತಿಳಿಸಿದೆ