ಬೆಂಗಳೂರು: ವಾರಾಂತ್ಯದ ಶನಿವಾರ ಮತ್ತು ಭಾನುವಾರ ನಗರದಲ್ಲಿ ಕರ್ಫ್ಯೂ ಇರುವ ಕಾರಣ ಜೂ. 26 ಮತ್ತು 27ರಂದು ನಗರದಲ್ಲಿ ಶೇ. 30 ರಷ್ಟು ಮಾತ್ರ ಬಿಎಂಟಿಸಿ ಬಸ್ ಗಳು ಸಂಚರಿಸಲಿವೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಇತರೆ ದಿನಗಳಲ್ಲಿ 4000 ಬಸ್ ಗಳು ಸಂಚರಿಸುತ್ತಿದ್ದು ವಾರಾಂತ್ಯದ ಎರಡು ದಿನ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಸಂಚರಿಸಲಿವೆ. ಸರ್ಕಾರವು ಜೂ. 25ರ ಶುಕ್ರವಾರ ಸಂಜೆ 7ಗಂಟೆಯಿಂದ ಜೂ. 28ರ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಈ ವೇಳೆ ದೈನಂದಿನ ವಸ್ತುಗಳಾದ ಹಾಲು, ತರಕಾರಿ, ಹಣ್ಣು, ದಿನಸಿ ಹಾಗೂ ಔಷಧಾಲಯ ಇತ್ಯಾದಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿರುತ್ತದೆ.
ಆದುದರಿಂದ, ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಲಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.