* ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿ 79 ವರ್ಷ
* ಭ್ರಷ್ಟಚಾರ ವಿರುದ್ಧದ ಚಳವಳಿಗೆ ಅಡ್ಡವಾದ ಜಾತಿ
* ದೇಶದಲ್ಲಿ ಮಿತಿ ಮೀರಿದ ಕುಟುಂಬ ರಾಜಕಾರಣ
* ದಿನದಿಂದ ದಿನ ಬಡವರ ಬದುಕು ಅಧೋಗತಿಯತ್ತ
ಮೈಸೂರು: ಅವತ್ತು 1942 ಆಗಸ್ಟ್ 8ರಂದು ಮಹಾತ್ಮ ಗಾಂಧೀಜಿ ಬ್ರಿಟಿಷರ ಅಧಿಪತ್ಯದ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ಕೊಟ್ಟರು. ಇವತ್ತು 2021ರ ಆಗಸ್ಟ್ 8ರಂದು ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು ಮತ್ತು ದರೋಡೆಕೋರರು ಭಾರತ ಬಿಟ್ಟು ತೊಲಗುವಂತೆ ದೇಶದ ಜನರೆಲ್ಲ ಹೋರಾಟ ರೂಪಿಸಬೇಕಿದೆ. ಆಗಲೇ ದೇಶ ಸುಭೀಕ್ಷ.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೈ.ಸಿ.ರೇವಣ್ಣ ಅವರ ಆಕ್ರೋಶದ ನುಡಿಗಳಿವು. ಸ್ವರಾಜ್ಯಕ್ಕಾಗಿ ಎಷ್ಟೊಂದು ತ್ಯಾಗಬಲಿದಾನ ನಡೆಯಿತು. ಇವತ್ತಿನ ಪರಿಸ್ಥಿತಿಯನ್ನು ವಿವರಿಸಲು ಪದಗಳೇ ಇಲ್ಲ.
ಅವತ್ತು ಮೈಸೂರು ರಾಜ್ಯಕ್ಕೆ ಒಬ್ಬನೇ ರಾಜ, ಒಬ್ಬನೇ ದಿವಾನ. ರಾಜ್ಯ ಸುಭೀಕ್ಷ. ಆಳ್ವಿಕೆ ಚೆನ್ನಾಗಿತ್ತು. ನಿತ್ಯದ ಬದುಕು ದುಬಾರಿಯಾಗಿರಲಿಲ್ಲ. ಇವತ್ತು ಎಷ್ಟು ಜನ ರಾಜರಿದ್ದಾರೆ. ನಾಡಿನ ಪರಿಸ್ಥಿತಿ ಏನಾಗಿದೆ?

ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ದೇಶದ ಜನರೆಲ್ಲ ಗಾಂಧಿ ನೇತೃತ್ವದಲ್ಲಿ ಒಂದಾದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಇವತ್ತು ಆ ರೀತಿ ಚಳವಳಿ ಮಾಡಲಿಕ್ಕೆ ಜಾತಿ ಅಡ್ಡ ಬಂದಿದೆ. ಭ್ರಷ್ಟಾಚಾರಿಗಳನ್ನು ಅತ್ಯಾಚಾರಿಗಳನ್ನು ಜಾತಿ ಪೊರೆಯುತ್ತಿದೆ. ಚಳವಳಿ ರೂಪಿಸುವುದು ಸವಾಲಾಗಿದೆ ಎಂದರು.
ರಾಜಕಾರಣಿಗಳು ಜನರ ತೆರಿಗೆ ಹಣವನ್ನು ತಿಂದು ತೇಗಿ ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿದ್ದಾರೆ. ರಾಜಕಾರಣಿಗಳು ಜಾತಿಗೆ ಸೀಮಿತರಾಗಿದ್ದಾರೆ. ಎಚ್.ಡಿ.ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರವೂ ಮೀತಿ ಮೀರಿದೆ.
ದೇಶ, ರಾಜ್ಯ ಸುಭೀಕ್ಷವಾಗಬೇಕಾದರೆ ಭ್ರಷ್ಟಾಚಾರಿಗಳನ್ನು ದೇಶ ಬಿಟ್ಟು, ವಿಧಾನಸೌಧ ಬಿಟ್ಟು ತೊಲಗುವಂತೆ ಕರೆ ಕೊಡಬೇಕು. ಅವರನ್ನು ಅಂಡಮಾನ ನಿಕೋಬಾರ್ ಜೈಲಿನಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಈ ದೇಶ ಇನ್ನೂ ಅಧೋಗತಿಗೆ ಇಳಿಯುತ್ತದೆ. ಬಡವ, ಬಗ್ಗರು ಬದುಕಲು ಮತ್ತೂ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೆ ನಮಗೆಲ್ಲಾ ಎಂ.ಎನ್.ಜೋಯಿಷರು ಪ್ರತಿ ಮನೆ ಮನೆಗೆ ಹೋಗಿ ಶಾಲೆಗಳಿಗೆ ಭೇಟಿ ಕೊಟ್ಟು ತಿಳವಳಿ ಕೊಡಬೇಕು ಎಂದು ಹೇಳುತ್ತಿದ್ದರು. ಇವತ್ತು ಜಾತಿ, ಭ್ರಷ್ಟಚಾರದ ಬಗ್ಗೆ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಸದೃಢ ದೇಶ ಕಟ್ಟುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕ್ವಿಟ್ ಇಂಡಿಯಾ ಚಳವಳಿ ನೆನಪು: ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟಾಗ ನನಗೆ ೧೫ ವರ್ಷ. ಕೆ.ಆರ್.ನಗರದ ಕೃಷ್ಣರಾಜೇಂದ್ರ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ಅಂದಿನ ಕೆ.ಆರ್.ನಗರದ ರಾಜಕೀಯ ಧುರೀಣರು ಎಚ್.ಎಂ.ಚೆನ್ನಬಸಪ್ಪ, ಸೋಮಾಜಿರಾವ್, ಚೆನ್ನಮಲ್ಲಶೆಟ್ಟಿ, ಪಿ.ಎಸ್.ಮಾದಪ್ಪ, ವೈ.ಎನ್.ನಂಜುಂಡಪ್ಪ, ಆಶ್ವತ್ಥ ನಾರಾಯಣ, ಗಣಪತಿ ಭಟ್ ಮುಂತಾದವರು ಮೆರವಣಿಗೆ ಹೊರಡಿದ್ದರು.
ಶಾಲೆಯಲ್ಲಿದ್ದ ಸ್ನೇಹಿತ ನಂಜಪ್ಪ, ಪುಟ್ಟಣ್ಣ ನಾನು ಮೇಷ್ಟ್ರು ಕೇಳದೇ ತರಗತಿ ಬಿಟ್ಟು ಮೆರವಣಿಗೆ ಸೇರಿಕೊಂಡೆವು. ಪೊಲೀಸರು ಬಂದು ಎಲ್ಲರನ್ನೂ ಬಂಧಿಸಿದರು. ಚಿಕ್ಕವರಾದ ನಮ್ಮನ್ನು ಬಂಧಿಸದೇ ಹುಣಸೂರಿನ ಕಾಕನಕೋಟೆ ಕಾಡಿನಲ್ಲಿ ಬಿಟ್ಟು ಶಿಕ್ಷೆ ಕೊಟ್ಟರು. ಅಲ್ಲಿಂದ ನಡೆದುಕೊಂಡು ಊರು ಸೇರಿದೆವು ಎಂದು ನೆನಪಿಸಿಕೊಂಡರು ರೇವಣ್ಣ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 19 ವರ್ಷ. ಸಂವಿಧಾನಕ್ಕೆ ಮೈಸೂರು ರಾಜ್ಯ ಸೇರಲು ಒಪ್ಪದಿದ್ದಾಗ ನಡೆದ ಮೈಸೂರು ಚಲೋ ಚಳವಳಿಯಲ್ಲಿ ಪಾಲ್ಗೊಂಡೆ. ಕೆ.ಆರ್.ನಗರದಿಂದ ಮೈಸೂರಿನ ತನಕ ಪಾದಯಾತ್ರೆ ಹಮ್ಮಿಕೊಂಡು ಹೆಂಡದಂಗಡಿಗೆ ಬೆಂಕಿಯಿಡುತ್ತ, ಮದ್ಯಪಾನ ಬಿಡುವಂತೆ ಅರಿವು ಮೂಡಿಸುತ್ತ ಬಿಳಿಗೆರೆ ಬಂದಾಗ ಪೊಲೀಸರು ಬಂಧಿಸಿ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿಟ್ಟಿದ್ದರು.
ಜಿಲ್ಲೆಯಲ್ಲಿ 130 ಸ್ವಾತಂತ್ರ್ಯ ಹೋರಾಟಗಾರರಿದ್ದೆವು. ಇವತ್ತು 30 ಜನರಿದ್ದೆವು. ಇವರಲ್ಲೂ 20 ಜನರು ಹಾಸಿಗೆಯಲ್ಲಿದ್ದಾರೆ. 10 ಜನರು ಮಾತ್ರ ಸಕ್ರಿಯರಾಗಿದ್ದೇವೆ ಎಂದು ಹೇಳಿದರು.
1936ರಲ್ಲಿ ಮಹಾತ್ಮ ಗಾಂಧೀಜಿ ಮೈಸೂರಿಗೆ ಭೇಟಿ ನೀಡಿದ್ದರು. ಆಗ ನನಗೆ 9 ವರ್ಷ ದೂರದಲ್ಲಿ ನಿಂತು ಅವರನ್ನು ನೋಡಿದ ಜ್ಞಾಪಕ ಇದೆ. ಗಾಂಧಿ ಅವರ ಪ್ರಭಾವ ನಮ್ಮ ನಾಯಕರಿಗಿತ್ತು. ಅವರಿಂದ ನಾವು ಪ್ರಭಾವಿತರಾದೆವು. ಸರಳ ಜೀವನ ನಡೆಸಿದೆವು.

-ವೈ.ಸಿ.ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರರು
ಭ್ರಷ್ಟರು, ಸುಳ್ಳರು ಮತ್ತು ಅತ್ಯಾಚಾರಿಗಳಿಗೂ ಜಾತಿ ರಕ್ಷಣೆಯಾಗಿದೆ. ಜಾತಿ ರಕ್ಷಣೆಗಿದೆ ಎಂಬ ಕಾರಣಕ್ಕೂ ಭ್ರಷ್ಟಚಾರ ಮೀತಿ ಮೀರಿದೆ. ಭ್ರಷ್ಟನ ವಿರುದ್ಧ ಹೋರಾಟ ಮಾಡಿದರೆ ಆ ಜಾತಿಯವರು ಬೆನ್ನಿಗೆ ನಿಲ್ಲುತ್ತಿದ್ದಾರೆ. ಹೀಗಾಗಿ ಚಳವಳಿ ರೂಪಿಸುವುದು ಸವಾಲಾಗಿದೆ ಎಂದು ವೈ.ಸಿ.ರೇವಣ್ಣ ತಿಳಿಸಿದರು.