ಮೈಸೂರು : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದ ಮೀಸಲಾತಿ ಅನುಕೂಲವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಇತರೆ ದಲಿತ ಉದ್ಯಮಿಗಳನ್ನು ವಂಚನೆ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಅನ್ನ ತಿಂದು ಸಕಾರಣವಿಲ್ಲದೆ ಅವರ ವಿರುದ್ಧವೇ ಆರೋಪ ಮಾಡುವುದು ದ್ರೋಹದ ಕೆಲಸ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ನರೇಂದ್ರ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರು ಛಲವಾದಿ ನಾರಾಯಣಸ್ವಾಮಿ ಆಗಿದ್ದರು, ಈಗ ಅವರು ಚಡ್ಡಿ ನಾರಾಯಣಸ್ವಾಮಿ ಆಗಿ ಮಾತ್ರ ಉಳಿದಿದ್ದಾರೆ. ಅವರು, ಮೈಸೂರಿನ ಕೆಐಡಿಬಿ’ಯಿಂದ ಕೇವಲ ೨ ಎಕರೆ ಮಾತ್ರ ಪಡೆದಿಲ್ಲ, ಹೂಟಗಳ್ಳಿಯಲ್ಲಿ ಅವರ ಮಗ ಪ್ರದೀಪ್ ಚೌದರಿ ಹೆಸರಿನಲ್ಲಿ ೨೧ ಗುಂಟೆ, ಮಂಡ್ಯ ತೂಬಿನಕೆರೆ ಹಾಗೂ ಹೊಸಕೋಟೆಯಲ್ಲೂ ಕೆಐಡಿಬಿ ನಿವೇಶನ ಮಂಜೂರು ಮಾಡಿಸಿಕೊಂಡು ನಂತರ ಅದನ್ನು ಪಾಟ್ನರ್ ಮಾಡಿಕೊಂಡು ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ನರೇಂದ್ರ ಹೇಳಿದರು.
ಒಬ್ಬ ಗ್ರಾಪಂ ಸದಸ್ಯನಾಗಲೂ ಅರ್ಹತೆ ಇಲ್ಲದ ನಾರಾಯಣಸ್ವಾಮಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರು, ರೈಲ್ವೆ ಬೋರ್ಡ್ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಸ್ಥಾನಮಾನಗಳನ್ನು ದೊರಕಿಸಿ ಕೊಟ್ಟರು, ಅದನ್ನೆಲ್ಲಾ ತಿಂದು ಅನುಭವಿಸಿ ಈಗ ಅವರ ವಿರುದ್ಧವೇ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ನರೇಂದ್ರ ಅವರು, ಖರ್ಗೆ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ಬಿಜೆಪಿಯಲ್ಲಿ ಮೈಲೇಜ್ ಸಿಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು ಬಿಡಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜೆ.ವಿಜಯಕುಮಾರ್ ಮಾತನಾಡಿ, ೧೯೬೯ರಲ್ಲಿ ರಾಜಕೀಯಕ್ಕೆ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಖಾತೆಗಳ ಮಂತ್ರಿಯಾಗಿ ವಿರೋಧ ಪಕ್ಷದ ನಾಯಕರಾಗಿ, ಕೇಂದ್ರ ಸಚಿವರಾಗಿ ಇದೀಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂದಿನ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹಿಂದುಳಿದ ಪ್ರದೇಶವಾಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ೩೭೧ಜೆ ಮೂಲಕ ನ್ಯಾಯ ಒದಗಿಸಿದ್ದಾರೆ. ಇದರಿಂದ ಅಲ್ಲಿನ ಯುವಕ, ಯುವತಿಯರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗಿದೆ. ೪೫ ವರ್ಷಗಳ ಹಿಂದೆಯೇ ಸಿದ್ಧಾರ್ಥ ಟ್ರಸ್ಟ್ ಪ್ರಾರಂಭವಾಗಿದೆ. ಕೆಐಡಿಬಿ ನಿಯಮಾನುಸಾರ ಟ್ರಸ್ಟ್‌ಗೆ ಜಮೀನು ನೀಡಲಾಗಿದೆ. ಹೀಗಿದ್ದರೂ ನಾರಾಯಣಸ್ವಾಮಿ ಅವರು ಬಿಜೆಪಿಯಿಂದ ಸುಪಾರಿ ಪಡೆದವರಂತೆ ಖರ್ಗೆ ಸಾಹೇಬರ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಸತ್ಯವಾಗಿದ್ದರೆ, ದಾಖಲೆ ಸಮೇತ ವಿಧಾನಸೌಧದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಶಿಫಾರಸ್ಸಿನಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿ ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧವೇ ಮಾತನಾಡುತ್ತಿರುವ ಛಲವಾದಿ ನಾರಾಯಣಸ್ವಾಮಿ ಅವರು, ಇಷ್ಟರಲ್ಲೇ ಬಟ್ಟೆ ಬಿಚ್ಚಿಕೊಂಡು ರಸ್ತೆಯಲ್ಲಿ ಕುಳಿತು ಬಿಜೆಪಿ ವಿರುದ್ಧ ಮಾತನಾಡುವ ದಿನಗಳೂ ಶೀಘ್ರದಲ್ಲೇ ಬರಲಿವೆ.

ಬಿ.ಜೆ.ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಛಲವಾದಿ ನಾರಾಯಣಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಂದ ಪಡೆದ ಸಹಾಯದ ಬಗ್ಗೆ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಳ್ಳಬೇಕು. ಒಳ ಮೀಸಲಾತಿ ಸೇರಿದಂತೆ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಚಕಾರ ಎತ್ತದ ಇವರು, ಕೇವಲ ರಾಜಕೀಯಕ್ಕಾಗಿ ಖರ್ಗೆ ಕುಟುಂಬದವರ ಬಗ್ಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ.
ಭಾಸ್ಕರ್, ಕಾಂಗ್ರೆಸ್ ಮುಖಂಡರು.