ಮಳೆಯಲ್ಲೇ ಚಾಮುಂಡೇಶ್ವರಿಯ ದರ್ಶನ ಪಡೆದ ಭಕ್ತರು!

ಮೈಸೂರು: ಕೊರೊನಾ ಹಿನ್ನಲೆಯಲ್ಲಿ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ ಹಿನ್ನಲೆಯಲ್ಲಿ ಗುರುವಾರವಾದ ಇಂದೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವುದು ಕಂಡು ಬರುತ್ತಿದೆ.

ಜಿಟಿ ಜಿಟಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಮುಂಜಾನೆಯೇ ಭಕ್ತರು ಬೆಟ್ಟದತ್ತ ಆಗಮಿಸಿ ದೇಗುಲದ ಬಳಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.

ಪಾದದ ಬಳಿಯಿಂದ ಮೆಟ್ಟಿಲೇರಿ ಒಂದಷ್ಟು ಭಕ್ತರು ಬಂದಿದ್ದರೆ, ಹೆಚ್ಚಿನ ಭಕ್ತರು ತಮ್ಮ ವಾಹನಗಳಲ್ಲಿ ಕುಟುಂಬ ಸಹಿತ ವಾಗಿ ಆಗಮಿಸುತ್ತಿದ್ದದ್ದು ಕಂಡು ಬಂದಿತು. ಶುಕ್ರವಾರದಿಂದ ಭಾನುವಾರದ ವರೆಗೆ ತೆರಳಲು ಅನುಮತಿ ಇಲ್ಲದ ಕಾರಣದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ಕೊರೊನಾ ಕಾರಣದಿಂದ ಕಳೆದ ವರ್ಷವೂ ಭಕ್ತರಿಗೆ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿಯ ದರ್ಶನ  ಭಾಗ್ಯ ಲಭಿಸಿರಲಿಲ್ಲ. ಈ ಬಾರಿಯೂ ಕೊರೊನಾ ಎರಡನೆ ಅಲೆ ಯಿಂದಾಗಿ ದರ್ಶನವಿಲ್ಲದಂತಾಗಿದೆ. ಹೀಗಾಗಿ ಒಂದು ದಿನದ ಮೊದಲೇ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುತ್ತಿರುವುದಾಗಿ ಭಕ್ತರು ಅನಿಸಿಕೆ ವ್ಯಕ್ತಪಡಿಸಿದರು.

ಇನ್ನೊಂದೆಡೆ ಆಷಾಢದ ಮಳೆ ಮುಂಜಾನೆಯಿಂದಲೇ ಬಿಡುವಿಲ್ಲದೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತ ವಾಗಿದೆ. ಆದರೂ ಭಕ್ತರು ಸುರಿಯುವ ಮಳೆಯಲ್ಲಿಯೇ ದೇಗುಲದತ್ತ ಆಗಮಿಸುತ್ತಿದ್ದರು.  ಇನ್ನೊಂದೆಡೆ ಚಾಮುಂಡಿಬೆಟ್ಟ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಬೆಳಿಗ್ಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತಾದರೂ ನಂತರ ಭಕ್ತರಿಗೆ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು.

ಸಾಮಾನ್ಯವಾಗಿ ಆಷಾಢದಲ್ಲಿ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತ ರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ತಾಯಿ ಚಾಮುಂಡೇಶ‍್ವರಿಯ ದರ್ಶನ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಜನವಲಯದಲ್ಲಿದೆ. ಹೀಗಾಗಿ ಚಾಮುಂಡಿಬೆಟ್ಟದ ಪಾದದಿಂದಲೇ ಪ್ರತಿಮೆಟ್ಟಿಲಿಗೆ ಕುಂಕುಮ, ಅರಶಿನ ಹಚ್ಚಿ, ಹೂವನ್ನಿಟ್ಟು ಪೂಜೆ ಮಾಡುತ್ತಾ ದೇಗುಲಕ್ಕೆ ತೆರಳುವುದು ಸಾಮಾನ್ಯವಾಗಿದೆ.

Leave a Reply

Your email address will not be published. Required fields are marked *