ಬೆಂಗಳೂರು ವಿವಿ ಸಿಂಡಿಕೇಟ್‌ಗೆ ದಂಡಿಕೆರೆ ನಾಗರಾಜ್ ನಾಮನಿರ್ದೇಶನ

ಮೈಸೂರು: ಬೆಂಗಳೂರು ‌ವಿಶ್ವವಿದ್ಯಾಲಯ (ಜ್ಞಾನಭಾರತಿ)ದ ಸಿಂಡಿಕೇಟ್‌ಗೆ ಸದಸ್ಯರನ್ನು ಮಂಗಳವಾರ ನಾಮನಿರ್ದೇಶನ ಮಾಡಲಾಗಿದೆ.

ವರುಣ ವಿಧಾನಸಭಾ ಕ್ಷೇತ್ರದ, ತಾಲ್ಲೂಕಿನ ದಂಡಿಕೆರೆ ಗ್ರಾಮದ ಮುಖಂಡ ದಂಡಿಕೆರೆ ನಾಗರಾಜ್ ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ
ನಾಮನಿರ್ದೇಶನ ಮಾಡಲಾಗಿದೆ. ಎಂಎ ಪತ್ರಿಕೋದ್ಯಮ ಪದವೀಧರರಾದ ಅವರಿಗೆ ಸಾಮಾನ್ಯ ವರ್ಗದ ಮೀಸಲಾತಿಯಲ್ಲಿ ಅವಕಾಶ ದೊರೆತಿದೆ. ತಮ್ಮ ಬೆಂಬಲಿಗರಾದ ಅವರಿಗೆ ಸ್ಥಾನ ಕಲ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾಡಿದ್ದಾರೆ.

ಈ ನಾಮನಿರ್ದೇಶನವನ್ನು ಮೂರು ವರ್ಷಗಳ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಾಡಲಾಗಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮೈಸೂರು ತಾಲ್ಲೂಕು ಡಿ.ಸಾಲುಂಡಿ ಗ್ರಾಮದ ಬೀರಪ್ಪ ಎಚ್.ಎನ್. (ಸಾಮಾನ್ಯ ವರ್ಗದ ಮೀಸಲಾತಿ) ಹಾಗೂ ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯಕ್ಕೆ ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದ ಕೆ.ಬಸವರಾಜು (ಸಾಮಾನ್ಯ ವರ್ಗದ ಮೀಸಲಾತಿ) ಅವರನ್ನು ನಾಮನಿರ್ದೇಶನ ಮಾಡಲಾಗಿದೆ.