ಮೈಸೂರು: ಗೌರಿ ಹಬ್ಬಕ್ಕೆ ಬಾಗಿನ ನೀಡಲು ಮೊರ ಬಹು ಮುಖ್ಯವಾಗಿದ್ದು, ಮೊದಲೆಲ್ಲ ಹಬ್ಬಕ್ಕೆ ತಿಂಗಳು ಇರುವಾಗಲೇ ಮೊರದ ತಯಾರಿ ಬಿಡುವಿಲ್ಲದೆ ನಡೆಯುತ್ತಿತ್ತಲ್ಲದೆ, ವ್ಯಾಪಾರವೂ ಜೋರಾಗಿಯೇ ಸಾಗುತ್ತಿತ್ತು ಆದರೆ ಇದೀಗ ಕೊರೊನಾ ಎಲ್ಲದಕ್ಕೂ ವಿಘ್ನ ತಂದಿದೆ.

ಮೈಸೂರಿನ ಬಂಬೂಬಜಾರ್, ನೂರಾಒಂದು ಗಣಪತಿ ದೇವಸ್ಥಾನ ಬಳಿ, ನಂಜುಮಳಿಗೆ ಮೊದಲಾದ ಕಡೆಗಳಲ್ಲಿ ಗೌರಿ ಹಬ್ಬಕ್ಕೆ ವಾರ ಇರುವಾಗಲೇ ಮೊರಗಳ ವ್ಯಾಪಾರದ ಭರಾಟೆ ಜೋರಾಗಿಯೇ ಇರುತ್ತಿತ್ತು. ಆದರೆ ಈ ವರ್ಷ ಮೊದಲಿನಂತೆ ಯಾವುದೂ ಕಂಡು ಬರುತ್ತಿಲ್ಲ. ಇದರಿಂದ ಹಬ್ಬದ ಸಮಯದಲ್ಲಿ ಒಂದಷ್ಟು ವ್ಯಾಪಾರವಾಗಿ ಆರ್ಥಿಕ ಸ್ಥಿತಿ ಸುಧಾರಿಸಬಹುದೆಂದು ನಂಬಿದ ಕಸುಬುದಾರರಿಗೂ ಸಂಕಷ್ಟ ಎದುರಾಗಿದೆ.

ಮೊದಲೇ ಬಿದಿರಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ದುಬಾರಿ ಬೆಲೆ ನೀಡಿ ಬೊಂಬನ್ನು ತಂದು ಮೊರ ಮಾಡಿ ಬಳಿಕ ಮಾರಿದರೆ ನಿಗದಿತ ಬೆಲೆ ಸಿಗುತ್ತಿಲ್ಲ. ಜೋಡಿ ಮೊರಕ್ಕೆ 150 ರೂ. ಸಿಕ್ಕರೆ ನಾವು ಕಷ್ಟಪಟ್ಟಿದಕ್ಕೆ ಮೂರು ಕಾಸು ಸಿಗುತ್ತದೆ. ಆದರೆ ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ನಷ್ಟವಾಗುತ್ತಿದೆ. ಮೊದಲಿನಂತೆ ಮೊರಗಳನ್ನು ಖರೀದಿಸುವವರು ಇಲ್ಲವಾಗಿದ್ದಾರೆ ಎನ್ನುವುದು ಕಸುಬುದಾರರ ಅಳಲಾಗಿದೆ. ಇತರೆ ದಿನಗಳಲ್ಲಿ ಸಾಮಾನ್ಯವಾಗಿ ಜನರು ತಮ್ಮ ನಿತ್ಯದ ಉಪಯೋಗಕ್ಕಾಗಿ ಪ್ಲಾಸ್ಟಿಕ್, ಅಲ್ಯುಮಿನಿಯಂ ಮೊರಗಳನ್ನು ಬಳಸುತ್ತಾರೆಯಾದರೂ ಗೌರಿ ಹಬ್ಬದ ಸಮಯದಲ್ಲಿ ಮಾತ್ರ ಬಾಗಿನ ಅರ್ಪಿಸುವ ಸಲುವಾಗಿ ಜನ ಬಿದಿರಿನಿಂದ ‘ಮೊರ’ಕ್ಕೆ ಮೊರೆಹೋಗುತ್ತಾರೆ.

ಸಾಮಾನ್ಯವಾಗಿ ಗೌರಿ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಹೀಗೆ ವಿವಿಧ ಪದಾರ್ಥಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಇದೇ ಸಂದರ್ಭ ಮೊರ ಮಾಡುವ ಕಸುಬುದಾರರಿಗೂ ಒಂದಷ್ಟು ಹಣ ಹರಿದಾಡುತ್ತದೆ. ಗೌರಿ ಹಬ್ಬದಲ್ಲಿ ಹಿಂದೂ ಸಂಪ್ರದಾಯದಂತೆ ಗೌರಿವ್ರತದ ಮೂಲಕ ಮುತ್ತೈದೆಯರಿಗೆ ಗೌರವ ಸಮರ್ಪಣೆಯ ಪದ್ಧತಿ(ಬಾಗಿನ) ರೂಢಿಯಲ್ಲಿದೆ. ಗೌರಿವ್ರತದ ವೇಳೆ ಮುತ್ತೈದೆಯರ ಮಾಂಗಲ್ಯ ಭಾಗ್ಯ ಮತ್ತಷ್ಟು ಗಟ್ಟಿಗೊಳ್ಳಲಿ ದೀರ್ಘ ಸುಮಂಗಲಿಯಾಗಿ ಬಾಳಲೆಂದು ಹರಸುವುದಕ್ಕಾಗಿಯೇ ಬಾಗಿನ ನೀಡುತ್ತಾರೆ. ಈ ಹಿಂದೆ ಪ್ರತಿ ಮನೆ- ಮನೆಯಲ್ಲೂ ಎರಡು ಜೊತೆ ಮೊರ ಇಡಬೇಕೆಂದು ಪ್ರತೀತಿ, ರಾಗಿ ಮತ್ತು ಭತ್ತದ ಶುದ್ಧೀಕರಿಸುವಿಕೆಗೆ ಕಣಗಳಲ್ಲಿ ಮೊರ ಇಲ್ಲದಿದ್ದರೆ ಆಗುತ್ತಿರಲಿಲ್ಲ. ಆದರೆ ಕಾಲಕ್ರಮೇಣ ಆಧುನಿಕತೆಯ ಜೀವನ ಶೈಲಿಗೆ ಮಾರು ಹೋಗುತ್ತಿರುವ ಜನರು ಯಂತ್ರಗಳಿಗೆ ಮೊರೆ ಹೋಗಿರುವುದರಿಂದ ಮೊರದಂತಹ ಗುಡಿ ಕೈಗಾರಿಕೆಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ ಗೌರಿ ಹಬ್ಬದ ಸಮಯದಲ್ಲಿಯಾದರೂ ಬಿದಿರಿನ ಮೊರಕ್ಕೆ ಬೇಡಿಕೆ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ವೇಳೆಯಲ್ಲಿಯೇ ಕೊರೊನಾದಿಂದಾಗಿ ವ್ಯಾಪಾರ ಕುಸಿದಿದೆ. ಇದರಿಂದ ಬಿದಿರು ಕಸುಬನ್ನು ಮಾಡುವ ಮೇದರ ಜನಾಂಗ ಸಂಕಷ್ಟಕ್ಕೀಡಾಗಿದೆ.

ಇನ್ನು ನಗರದಲ್ಲಿ ಬಿದಿರಿನಿಂದ ಹೂವಿನ ಬುಟ್ಟಿ, ಕುಕ್ಕೆ, ಬೀಸಣಿಕೆ, ಪಂಜರ, ಏಣಿ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ತಯಾರು ಮಾಡಿ ಅದನ್ನು ಮಾರಾಟ ಮಾಡಿಕೊಂಡು ಅದರಿಂದಲೇ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬಿದಿರಿನ ಬೆಲೆ ಗಗನಕ್ಕೇರಿದ್ದು, ನಗರದ ಬಂಬೂಬಜಾರ್ ನಿಂದ ಬಿದಿರನ್ನು ತಂದು ಮೊರಗಳನ್ನು ತಯಾರು ಮಾಡಲಾಗುತ್ತಿದೆ. ಒಂದು ಬೊಂಬಿನಲ್ಲಿ ಹತ್ತು ಜೊತೆ ಮೊರ ತಯಾರಿಸ ಬಹುದಾಗಿದ್ದು, ಮಾರಾಟವಾದರೆ ತೊಂದರೆಯಿಲ್ಲ. ಇಲ್ಲದೆ ಹೋದರೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.