ಅರಸೀಕೆರೆ : ಅಕ್ರಮ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮದ್ಯವನ್ನು ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಅವರ ಸಮ್ಮುಖದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಾಶ ಮಾಡಿದರು.
ಖಚಿತ ಮಾಹಿತಿ ಆಧರಿಸಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ಪತ್ತೆ ಹಚ್ಚಿ ನಾನಾ ಕಂಪನಿಗಳ 1485.840.ಲೀಟರ್ ಮದ್ಯ ಹಾಗೂ ಸುಮಾರು 666.690.ಲೀಟರ್ ನಷ್ಟು ಬಿಯರ್ ಅನ್ನು ವಶಪಡಿಸಿಕೊಂಡಿದ್ದ ಅಬಕಾರಿ ನಿರೀಕ್ಷಕ ಎಂ.ಸಿ. ಶಂಕರ.ಮತ್ತು ಸಬ್ ಇನ್‌್ಸ ಪೆಕ್ಟರ್ ಜಯಕುಮಾರ್ ಹಾಗೂ ಸಿಬ್ಬಂದಿ ಇಲಾಖೆಯ ನಿಯಮಾನುಸಾರ ಪರಿಸರ ಮಾಲಿನ್ಯವಾಗದಂತೆ ಮದ್ಯವನ್ನು ನಾಶ ಪಡಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಮಾತನಾಡಿ, ಅಕ್ರಮವಾಗಿ ಮದ್ಯ ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಸಾಗಣೆ ಮಾಡುವುದು ಕಾನೂನು ರೀತಿ ಶಿಕ್ಷಾರ್ಹ ಅಪರಾಧವಾಗಿದ್ದು, ಇಂಥ ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಭೇದಿಸಿ ವಶಪಡಿಸಿಕೊಳ್ಳಲಾಗುವ ಮದ್ಯವನ್ನು ನಾಶಪಡಿಸುವುದು ನಿಯಮವಾಗಿದೆ ಈ ನಿಟ್ಟಿನಲ್ಲಿ ಇಂದು ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಮದ್ಯವನ್ನು ಪರಿಸರಕ್ಕೆ ಧಕ್ಕೆಯಾಗದ ರೀತಿ ನಾಶ ಪಡಿಸಲಾಗಿದೆ ಎಂದು ಹೇಳಿದರು.
ಅಬಕಾರಿ ಉಪ ಅಧೀಕ್ಷಕ ರಘು ಮಾತನಾಡಿ, ತಾಲೂಕು ಅಬಕಾರಿ ನಿರೀಕ್ಷಕ ಶಂಕರ್, ಉಪ ನಿರೀಕ್ಷಕ ಜಯಕುಮಾರ್ ತಂಡ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ದಾಳಿ ನಡೆಸಿ ಇಲಾಖೆಯ ನಿಯಮಾನುಸಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಲ್ಲದೇ, ವಶಪಡಿಸಿಕೊಂಡ ಲಕ್ಷಾಂತರ ಬೆಲೆ ಬಾಳುವ ಮದ್ಯವನ್ನು ಸಾರ್ವಜನಿಕವಾಗಿ ನಾಶಪಡಿಸುವ ಮೂಲಕ ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದರು.
ಅಬಕಾರಿ ನಿರೀಕ್ಷಕ ಶಂಕರ್, ಉಪ ನಿರೀಕ್ಷಕ ಜಯಕುಮಾರ್, ಕಂದಾಯ ಇಲಾಖೆಯ ಆರ್.ಐ.ಮಂಜುನಾಥ್, ಅಬಕಾರಿ ಇಲಾಖೆಯ ಸಿಬ್ಬಂದಿ ಹರೀಶ್, ತೋಂಟೇಶ,
ಆಕಾಶ್ ಬೆನ್ನೂರು, ದ್ಯಾಮಪ್ಪ ಕಮರದ ಹಾಗೂ ರಂಜಿತಾ ಆರ್. ಹಾಜರಿದ್ದರು.