ಮೈಸೂರು: ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದ್ದು, ಅದರಲ್ಲೂ ಆಷಾಢ ಶುಕ್ರವಾರ ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.

ಇದು ಹಿಂದಿನ ಕಾಲದಿಂದಲೂ ನಡೆದು ಬಂದಿದ್ದು ಆಷಾಢ ಶುಕ್ರವಾರ ಭಕ್ತ ಪ್ರವಾಹವೇ ಹರಿದು ಬರುತ್ತಿತ್ತು ಆದರೆ ಕೊರೊನಾ ಹಿನ್ನಲೆಯಲ್ಲಿ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ ಹಿನ್ನಲೆಯಲ್ಲಿ ಇದೀಗ ಒಂದು ದಿನ ಮುಂಚಿತವಾಗಿ ಅಂದರೆ ಗುರುವಾರವೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವುದು ಕಂಡು ಬರುತ್ತಿದೆ.

ಮುಂಜಾನೆ ಮಂಜು ಮುಸುಕು ಮತ್ತು ಜಿಟಿ ಜಿಟಿ ಸುರಿಯುವ ಮಳೆಯಲ್ಲಿಯೇ ಭಕ್ತರು ಬೆಟ್ಟದತ್ತ ಆಗಮಿಸಿ ದೇಗುಲದ ಬಳಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಬೆಳಿಗ್ಗೆಯಿಂದಲೇ ಪಾದದ ಬಳಿಯಿಂದ ಮೆಟ್ಟಿಲೇರಿ ಒಂದಷ್ಟು ಭಕ್ತರು ಬಂದಿದ್ದರೆ, ಹೆಚ್ಚಿನ ಭಕ್ತರು ತಮ್ಮ ವಾಹನಗಳಲ್ಲಿ ಕುಟುಂಬ ಸಹಿತ ವಾಗಿ ಆಗಮಿಸುತ್ತಿದ್ದದ್ದು ಕಂಡು ಬಂದಿತು. ಶುಕ್ರವಾರದಿಂದ ಭಾನುವಾರದ ವರೆಗೆ ತೆರಳಲು ಅನುಮತಿ ಇಲ್ಲದ ಕಾರಣದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗರುವಾರವೇ ಆಗಮಿಸುತ್ತಿರುವುದು ಕಳೆದ ಎರಡು ವಾರದಿಂದ ಕಂಡು ಬರುತ್ತಿದೆ.