ಮೈಸೂರು: ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ನಗರದ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಟ್ರಾಮಾ ಕೇಸರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಸಿ ಆಸ್ಪತ್ರೆಗಳಿಗೆ ಭೇಟಿನೀಡಿ, ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಆಕ್ಸಿಜನ್, ವೆಂಟಿಲೇಟರ್, ತುರ್ತು ನಿಗಾಘಟಕಗಳಲ್ಲಿ ಇರುವ ಸೌಲಭ್ಯಗಳು ಎಂಬಿತ್ಯಾದಿಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಸಲಹೆಗಳನ್ನೂ ನೀಡಿದರು.
ಇದೇ ವೇಳೆ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರು ವೈದ್ಯಕೀಯಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ದಿನೇಶ್ ಅವರಿಗೆ 2 ತಿಂಗಳ ಐವಿಐಜಿ ಡ್ರಗ್ಸ್ ಸ್ಟಾಕ್ ಇರುವಂತೆ ನೋಡಿಕೊಳ್ಳಬೇಕು. ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗೆ ಮಾತ್ರವಲ್ಲದೆ, ಖಾಸಗಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಬೇಕಿದ್ದಲ್ಲಿ ಐವಿಐಜಿ ಅನ್ನು ಪೂರೈಸಬೇಕು ಎಂದು ಸೂಚಿಸಿದರು.

ಅಲ್ಲದೆ, 2ನೇ ಅಲೆಯಲ್ಲಿ ಉಂಟಾದ ಸಮಸ್ಯೆಗಳು ಮತ್ತೆ ಮರುಕಳಿಸಬಾರದು. ಕೋವಿಡ್ ಹೆಚ್ಚಾಗುತ್ತಿದ್ದು, ಚಿಕಿತ್ಸೆಗೆ ಬೇಕಾದ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡೀನ್ ಡಾ.ದಿನೇಶ್ ಅವರು, ಕೆ.ಆರ್.ಆಸ್ಪತ್ರೆಯಲ್ಲಿ 612 ಹಾಸಿಗೆಗಳು, ಚೆಲುವಾಂಬ ಆಸ್ಪತ್ರೆಯಲ್ಲಿ 157, ಚೆಲುವಾಂಬ ಮಕ್ಕಳ ವಾರ್ಡ್ನಲ್ಲಿ 131, ಟ್ರಾಮಾ ಸೆಂಟರ್ನಲ್ಲಿ 150 ಹಾಗೂ ಪಿಕೆಟಿಬಿ ಆಸ್ಪತ್ರೆಯಲ್ಲಿ 133 ಹಾಸಿಗೆಗಳು ಲಭ್ಯವಿದೆ. ಅಲ್ಲದೆ, ಕೆ.ಆರ್ಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ 31 ವೆಂಟಿಲೇಟರ್, ಕೋವಿಡೇತರ ರೋಗಿಗಳಿಗೆ 37 ವೆಂಟಿಲೇಟರ್, ಚೆಲುವಾಂಬದಲ್ಲಿ ಮಕ್ಕಳ ಚಿಕಿತ್ಸೆಗಾಗಿ 15 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಟ್ರಾಮಾಕೇರ್ ಕೇಂದ್ರದಲ್ಲಿ 15ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 15 ವೆಂಟಿಲೇರ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೂಕ್ತ ಆಕ್ಸಿಜನ್ ವ್ಯವಸ್ಥೆಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಂದುವರಿದು, ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು, ಕೋವಿಡೇತರ ರೋಗಿಗಳು ಹಾಗೂ ಕೋವಿಡ್ ಲಕ್ಷಣಗಳಿದ್ದೂ ನೆಗೆಟಿವ್ ಇರುವವರನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.