ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠಕ್ಕೆ ಭೇಟಿ ನೀಡಿದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರರೊಂದಿಗೆ ಉಭಯಕುಶಲೋಪರಿ ನಡೆಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಅವರು ಲಿಂಗೈಕ್ಯವಾಗಿರುವ ಹಿನ್ನಲೆಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿರುವುದಾಗಿ ತಿಳಿಸಿದರು.
ತಮ್ಮ ತಂದೆಯವರಿಗೂ ಹಿರಿಯ ಶ್ರೀಗಳೊಂದಿಗೆ ಒಡನಾಟವಿಟ್ಟುಕೊಂಡಿದ್ದರು. ಹೀಗಾಗಿ ಸ್ವಾಭಾವಿಕವಾಗಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿರುವುದಾಗಿ ಹೇಳಿದರಲ್ಲದೆ, ಇದರ ಹೊರತಾಗಿ ಭೇಟಿಯ ಹಿಂದೆ ಇನ್ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು.
ಇದೇ ವೇಳೆ ನೀವು ಸಿಎಂ ರೇಸ್ ನಲ್ಲಿ ಇದ್ದೀರಾ ಎಂಬ ಪತ್ರಕರ್ತರು ಪ್ರಶ್ನೆಗೆ ಆ ಸಮಯ, ಸಂದರ್ಭ ಬಂದಾಗ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರಲ್ಲದೆ, ಭಾವಿ ಸಿಎಂ ಎಂದು ಘೋಷಣೆ ಕೂಗಿದ ಕಾರ್ಯಕರ್ತರಿಗೆ ಆ ರೀತಿ ಕೂಗದಂತೆ ಹೇಳಿದ್ದೇನೆ. ಚುನಾವಣೆಗೆ ಎರಡು ವರ್ಷ ಇದೆ. ಹೀಗಾಗಿ ಈಗಲೇ ಈ ವಿಚಾರದಲ್ಲಿ ಚರ್ಚೆ ನಡೆಸುವುದು ಸರಿಯಲ್ಲ. ಚುನಾವಣೆಗೆ ಹೋಗಿ ಗೆದ್ದು, ಬಹುಮತ ಬಂದ ಮೇಲೆ, ಶಾಸಕರು ಸಿಎಂ ಯಾರಾಗಬೇಕೆಂಬ ಅಭಿಪ್ರಾಯವನ್ನು ಹೇಳುತ್ತಾರೆ. ಆದ್ದರಿಂದ ಸಿಎಂ ವಿಚಾರದ ಚರ್ಚೆ ನಿಲ್ಲಿಸಿ, ಇದನ್ನು ಇನ್ನು ಮುಂದಕ್ಕೆ ಬೆಳೆಸಬೇಡಿ ಎಂದು ಸ್ನೇಹಿತರು, ಹಿರಿಯರಲ್ಲಿ ಮನವಿ ಮಾಡಿಕೊಂಡರು.
ಇಲ್ಲಿಯವರೆಗೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ನಿರ್ದಿಷ್ಟವಾಗಿ ಇಂತವರೇ ಮುಖ್ಯಮಂತ್ರಿ ಎಂದು ಹೆಸರು ಸೂಚಿಸಿಲ್ಲವಾದ್ದರಿಂದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಹೇಳಿದರು.
ಇನ್ನು ಮೈಸೂರಿಗೆ ಡಾ.ಜಿ.ಪರಮೇಶ್ವರ್ ಅವರು ಆಗಮಿಸುತ್ತಿರುವಂತೆಯೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರಿಗೆ ಗುಲಾಬಿ ಹೂವಿನ ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಈ ವೇಳೆ ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪುಷ್ಪ ಅಮರನಾಥ್ ಸೇರಿದಂತೆ ಪಕ್ಷದ ಮುಖಂಡರು ಜತೆಗಿದ್ದರು.
ಕಾಂಗ್ರೆಸ್ ಪಕ್ಷದೊಳಗೆ ಸಿಎಂ ಅಭ್ಯರ್ಥಿ ವಿಚಾರಗಳಲ್ಲಿ ನಾಯಕರು ನೀಡುತ್ತಿರುವ ಹೇಳಿಕೆಗಳು ಮತ್ತು ಪಕ್ಷದಲ್ಲಿನ ಬೆಳವಣಿಗೆಯ ಹಿನ್ನಲೆಯಲ್ಲಿ ಡಾ.ಜಿ.ಪರಮೇಶ್ವರ್ ಅವರ ಮೈಸೂರು ಭೇಟಿ ಒಂದಷ್ಟು ಮಹತ್ವವನ್ನು ಪಡೆದಿರುವುದಂತು ಸತ್ಯ.