ಮೈಸೂರು: ಪದವಿ ಶಿಕ್ಷಣವನ್ನು ಜಾಗತಿಕವಾಗಿ ಸರಕನ್ನಾಗಿ ಮಾಡಿ, ವಿಶ್ವವಿದ್ಯಾಲಯಗಳನ್ನು ಅರೆಬೆಂದ ಕೌಶಲ್ಯ ಸರ್ಟಿಫಿಕೆಟ್‌ಗಳನ್ನು ಬಿಕರಿ ಮಾಡುವ ಕೇಂದ್ರಗಳನ್ನಾಗಿಸುವ ಹುನ್ನಾರವೇ 3 ವರ್ಷದ ಪದವಿಯನ್ನು 4 ವರ್ಷದ ಪದವಿ ಕೋರ್ಸ್ ಎಂದು ಕರ್ನಾಟಕ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಎಂದು ಹೇಳಿದರು.
ನಾಲ್ಕು ವರ್ಷದ ಪದವಿ ಕೋರ್ಸ್ ಅನುಷ್ಠಾನದ ಕುರಿತು ಮಾತನಾಡಿದ ಕೇಂದ್ರ ಸರ್ಕಾರದ ವಿವಾದಾಸ್ಪದ ಹಾಗೂ ಭಾರತದ ಜನತೆಯಿಂದ ತಿರಸ್ಕರಿಸಲ್ಪಟ್ಟ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಎನ್.ಇ.ಪಿ-2020ರ ಅಂಶವಾಗಿರುವ 4 ವರ್ಷದ ಬಹು ಶಿಸ್ತೀಯ ಪದವಿ ಶಿಕ್ಷಣವನ್ನು ರಾಜ್ಯದ ಶಿಕ್ಷಣ ತಜ್ಞರ ಜೊತೆ ಯಾವುದೇ ಚರ್ಚೆಯಿಲ್ಲದೆ ಅತ್ಯಂತ ಆತುರದಲ್ಲಿ ಪದವಿ ಶಿಕ್ಷಣಕ್ಕೆ ಹಾಗೂ ಉನ್ನತ ಶಿಕ್ಷಣಕ್ಕೆ ಮಾರಕವಾಗಿರುವ 4 ವರ್ಷದ ಪದವಿ ಶಿಕ್ಷಣವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿರುವುದನ್ನು ಖಂಡಿಸುವುದಾಗಿ ಹೇಳಿದರು.
ನಮ್ಮ ದೇಶದ ಶಿಕ್ಷಣವನ್ನು ಜಾಗತಿಕ ಬಂಡವಾಳಿಗರಿಗೆ, ದೇಶೀಯ ಹೂಡಿಕೆದಾರರಿಗೆ ಬಂಡವಾಳವನ್ನು ಹೂಡುವ ಫಲವತ್ತಾದ ಕ್ಷೇತ್ರವನ್ನಾಗಿ ಮಾಡಿ, ಶಿಕ್ಷಣವನ್ನು ಜಾಗತಿಕ ಸರಕನ್ನಾಗಿ ಮಾಡುವ ಹುನ್ನಾರದೊಂದಿಗೆ ನಾಲ್ಕು ವರ್ಷದ ಬಹುಶಿಸ್ತೀಯ ಪದವಿ ಕೋರ್ಸ್ ಅನ್ನು ಜಾರಿಗೆ ತರಲಾಗುತ್ತಿದೆ. ಹಲವು ದೇಶಗಳಲ್ಲಿ 4 ವರ್ಷದ ಪದವಿ ಚಾಲ್ತಿಯಲ್ಲಿರುವುದರಿಂದ ‘ವಿದೇಶಿ ವಿದ್ಯಾರ್ಥಿ ಗ್ರಾಹಕ’ರನ್ನು ಭಾರತ, ಕರ್ನಾಟಕದ ಉನ್ನತ ಶಿಕ್ಷಣಕ್ಕೆ ಆಕರ್ಷಿಸುವುದಕ್ಕಾಗಿ ನಮ್ಮಲ್ಲಿರುವ 3 ವರ್ಷದ ಪದವಿಯನ್ನು 4 ವರ್ಷದ ಪದವಿಯನ್ನಾಗಿ ಮಾಡುತ್ತಿದ್ದಾರೆ. ಈ 4 ವರ್ಷದ ಪದವಿಯಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಕೇವಲ 2 ಸೆಮಿಸ್ಟರಗಳಿಗೆ ಇಳಿಸಲಾಗಿರುವುದು ಖಂಡನೀಯ. ಭಾಷೆಯ ಅಥವಾ ಸಾಹಿತ್ಯದ ಕಲಿಕೆಯು ವಿದ್ಯಾರ್ಥಿಗಳಲ್ಲಿ ಸೂಕ್ಷ್ಮ ಭಾವನೆ, ಸಾಮಾಜಿಕ ಕಳಕಳಿ ಹಾಗೂ ಉನ್ನತ ಮೌಲ್ಯ, ಸಂಸ್ಕೃತಿ ಬೆಳೆಸುವುದಕ್ಕೆ ಬೋಧಿಸುವುದನ್ನು ಬಿಟ್ಟು ಕೇವಲ ಭಾಷಾ ಸಂವಹನಕ್ಕಾಗಿ ಸೀಮಿತಗೊಳಿಸಿರುವುದು ಇವರ ವ್ಯಾಪಾರಿ ಮನೋಭಾವವನ್ನು ತೋರಿಸುತ್ತದೆ. ಶಿಕ್ಷಣದ ಜಾಗತಿಕ ಸರಕನ್ನಾಗಿ ಮಾಡುವ ಹುನ್ನಾರವನ್ನು ಮರೆಮಾಚಲು ನೀತಿ ನಿರೂಪಕರು 4 ವರ್ಷದ ಪದವಿ ಕೋರ್ಸ್ ‘ಬಹು ನಿರ್ಗಮನ’ದ ಆಯ್ಕೆಯನ್ನು ನೀಡುತ್ತದೆ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.
ನಾಲ್ಕು ವರ್ಷದ ಪದವಿಯು ವಿದ್ಯಾರ್ಥಿಗಳಿಗೆ ಒಂದು ವರ್ಷವು ಹೆಚ್ಚುವರಿಯಾಗಿದ್ದು, ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಶೇ. 75ಕ್ಕಿಂತ ಅಧಿಕ ಖಾಸಗೀ ಕಾಲೇಜುಗಳಿವೆ. ಒಂದು ವರ್ಷದ ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಇದು ಈಗಾಗಲೇ ತೀವ್ರವಾಗಿ ಶೋಷಣೆಗೊಳಗಾಗುತ್ತಿರುವ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಹೊರೆಯಾಗಲಿದೆ. ಇದರಿಂದ ಎಷ್ಟೋ ಬಡವಿದ್ಯಾರ್ಥಿಗಳು ಸಮಗ್ರವಾದ ನೈಜ ಪದವಿ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.