ಮೈಸೂರು: ಇದು ಮೃಗಾಲಯದಲ್ಲಿರುವ ವಯಸ್ಸಾದ ಆನೆಗಳಿಗಾಗಿಯೇ ನಿರ್ಮಿಸಲಾದ ಈಜುಕೊಳ. ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಈ ಈಜುಕೊಳದಲ್ಲಿ ಆನೆಗಳು ಅಡ್ಡಾಡುತ್ತಾ ಖುಷಿಯಾಗಿ ಕಾಲ ಕಳೆಯುತ್ತಿದ್ದು, ಅವುಗಳು ವಿಹಾರ ನಡೆಸುತ್ತಿರುವ ದೃಶ್ಯ ಜನರ ಗಮನಸೆಳೆಯುತ್ತಿದೆ.

ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಿರ್ಮಾಣವಾಗಿರುವ ಈ ಈಜುಕೊಳ ರಾಜ್ಯದ ಮಟ್ಟಿಗೆ ಬೇರೆಲ್ಲೂ ಇಲ್ಲ. ಪ್ರಾಯೋಗಿಕವಾಗಿ ಮೊದಲ ಬಾರಿಗೆ ನಿರ್ಮಿಸಲಾಗಿದೆ. ಒಂದು ವೇಳೆ ಈ ಪ್ರಯೋಗ ಯಶಸ್ಸು ಆಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಡೆ ಈಜುಕೊಳ ನಿರ್ಮಾಣವಾದರೂ ಅಚ್ಚರಿ ಪಡಬೇಕಾಗಿಲ್ಲ.
ಇನ್ನು ಈ ಈಜುಕೊಳದಿಂದ ಆನೆಗಳಿಗೇನು ಪ್ರಯೋಜನ ಎಂಬ ಪ್ರಶ್ನೆಗೆ ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಕಾಡುವ ಸಂದಿವಾತದಂತಹ ರೋಗಗಳಿಗೆ ರಾಮಬಾಣವಾಗಲಿದೆ ಎಂಬ ಉತ್ತರ ಮೃಗಾಲಯ ಮೂಲಗಳಿಂದ ಕೇಳಿ ಬಂದಿದೆ. ಆನೆಗಳಲ್ಲಿ ಕಂಡು ಬರುವ ಸಂದಿವಾತಕ್ಕೆ ಈಜುಕೊಳ ಮದ್ದು ಎಂದು ಹೇಳಲಾಗುತ್ತಿದ್ದು, ಆ ಕಾರಣಕ್ಕಾಗಿ ಪ್ರಾಯೋಗಿಕವಾಗಿ ವಿನೂತನ ಪ್ರಯತ್ನವನ್ನು ಮಾಡಲಾಗಿದೆ.