ಕನಕಪುರ: ಗಣಿಗಾರಿಕೆ ನಡೆಸಲು ಸಿಡಿಮದ್ದುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಸ್ಪೋಟಕ ವಸ್ತುಗಳು ಸಿಡಿದು ಓರ್ವ ಸಜೀವ ದಹನವಾಗಿರುವ ದುರ್ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಳೇಗವಿ ಮಠದ ಬಳಿ ಮಧ್ಯಾಹ್ನ ನಡೆದಿದೆ.

ಕನಕಪುರ ಬೃಂದಾವನ ನಗರದಲ್ಲಿ ವಾಸವಾಗಿರುವ ಮಹೇಶ ಅಲಿಯಾಸ್ ರಾಡ್ ಮಹೇಶ್ (48) ಸಿಡಿಮದ್ದಿನ ರಭಸಕ್ಕೆ ಈತನ ದೇಹ ಮತ್ತು ಈತನ ಕಾರು ಸಂಪೂರ್ಣ ಛಿದ್ರ ಛಿದ್ರಗೊಂಡು ಸುಮಾರು ಅರ್ಧ ಕಿ.ಮೀ. ನಷ್ಟು ದೂರಕ್ಕೆ ಸಿಡಿದು ಬಿದ್ದಿವೆ. ಮೃತ ವ್ಯಕ್ತಿಯು ಮೂಲತಃ ದೊಡ್ಡಾಲಹಳ್ಳಿ ಗ್ರಾಮದವರಾಗಿದ್ದು, ವ್ಯಾಪಾರಕ್ಕೋಸ್ಕರ ಕನಕಪುರ ಪಟ್ಟಣದಲ್ಲಿಯೇ ನೆಲೆಸಿದ್ದರು. ನಗರದ ಸಂಗಮ ರಸ್ತೆಯ ಶಕ್ತಿ ಮೈನ್ಸ್ ಅಂಗಡಿಯಿಂದ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ (ಕೆಎ51 ಪಿ3384) ಸಂಖ್ಯೆಯ ಕಾರಿನಲ್ಲಿ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಮರಳೇಗವಿ ಮಠದ ಸರಹದ್ದಿನಲ್ಲಿ ಕಪ್ಪು ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಜಾಗಕ್ಕೆ ಜಿಲೆಟಿನ್, ಮದ್ದು, ರಾಡ್, ಇತರೆ ಸ್ಪೋಟಕ ವಸ್ತುಗಳನ್ನು ಸಾಗಿಸುವಾಗ ಸಿಡಿಮದ್ದುಗಳು ತಾನಾಗೆ ಆಕಸ್ಮಿಕವಾಗಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತನಿಗೆ ಪತ್ನಿ ಹಾಗು ಇಬ್ಬರು ಪುತ್ರರಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡದ ಹುಣಸೋಡುವಿನಲ್ಲಿ ಜರುಗಿದ ಸ್ಫೋಟಕ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಘಟನೆ ಸಂಭವಿಸಿದೆ. ಶ್ರೀಕ್ಷೇತ್ರ ಮರಳೇಗವಿ ಮಠದ ಶಿವರುದ್ರ ಸ್ವಾಮೀಜಿಗಳಿಂದ ಕಪನಿಗೌಡನದೊಡ್ಡಿಯ ದಿವಂಗತ ಶಿವಶಂಕರ್‌ರವರಿಗೆ ಗುತ್ತಿಗೆ ಆಧಾರದ ಮೇಲೆ ಗಣಿಗಾರಿಕೆಯನ್ನು ಲೀಜ್‌ಗೆ ನೀಡಲಾಗಿತ್ತು. ಇವರು ಮೃತಪಟ್ಟ ನಂತರ ತಮಿಳುನಾಡಿನ ಸೆಲ್ವಂ ಎಂಬುವವರಿಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿತ್ತು.
ಮಧ್ಯಾಹ್ನ 3.23ರ ಸಮಯದಲ್ಲಿ ಭಾರಿ ಸ್ಪೋಟಕದಿಂದ ಶಬ್ಧ ಕೇಳಿ ಬಂದು ಭೂಕಂಪನ ರೀತಿಯಲ್ಲಿ ಭೂಮಿ ಕಂಪಿಸಿತು. ಇದರಿಂದ ಹೊಲ, ಗದ್ದೆ, ಅಕ್ಕಪಕ್ಕದಲ್ಲಿದ್ದ ಜನರು ಭಯಭೀತರಾಗಿ ಬಂದು ನೋಡುವಷ್ಟರಲ್ಲಿ ಕಾರು ಮತ್ತು ಮಹೇಶ್ ಛಿದ್ರಛಿದ್ರವಾಗಿ ಹೊತ್ತಿ ಉರಿಯುತ್ತಿದ್ದರು.
ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಡಾ.ಚಂದ್ರಶೇಖರ್ ಭೇಟಿನೀಡಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಗಿರೀಶ್, ಸ್ಥಳೀಯ ಅಧಿಕಾರಿಗಳು ಮತ್ತು ಕುಟುಂಬಸ್ಥರಿಂದ ಮಾಹಿತಿ ಪಡೆದರು. ಡಿವೈಎಸ್‌ಪಿ ಕೆ.ಎನ್.ರಮೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಟಿ.ಕೃಷ್ಣ, ಸಾತನೂರು ಎಸ್.ಐ. ರವಿಕುಮಾರ್, ಎಸ್.ಐ.ಗಳಾದ ಹೇಮಂತ್‌ಕುಮಾರ್, ಅನಂತ್‌ರಾಮ್, ಪೊಲೀಸ್ ಸಿಬ್ಬಂದಿ ಇದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಬಂದು ಅಗ್ನಿ ನಂದಿಸಿದರು. ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.