ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ಬಲಮುರಿ ಜಲಾವೃತವಾಗಿದ್ದು, ಸಂಪರ್ಕ ಕಡಿದುಕೊಂಡಿದೆ. ಮತ್ತೊಂದೆಡೆ ಕಾವೇರಿ, ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳ ಹರಿವು ಹತ್ತು ಸಾವಿರ ದಾಟಿದ್ದು, ಸಂಪೂರ್ಣ ಭರ್ತಿಯಾಗಲು ನಾಲ್ಕು ಅಡಿಯಷ್ಟು ಬಾಕಿಯಿದೆ.

ಪುಷ್ಯ ಮಳೆ ಜುಲೈ 19 ರಿಂದ ಆರಂಭವಾಗಿದ್ದು, ಅಬ್ಬರಿಸುತ್ತಲೇ ಇರುವುದರಿಂದ ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶ ಜಲಾವೃತವಾಗಿವೆ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು, ಧರೆಗುರುಳಿದ ಕಾರಣ ಜಿಲ್ಲೆಯ ಬಹಳಷ್ಟು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಇನ್ನು ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣವನ್ನು ನೋಡುವುದಾದರೆ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ ಒಂದು ದಿನದ ಅವಧಿಯಲ್ಲಿ ಸರಾಸರಿ 71.46 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ 1415.62 ಮಿ.ಮೀ ಮಳೆ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 884.12 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 531 ಮಿ.ಮೀ. ಅಧಿಕ ಮಳೆ ಸುರಿದಿರುವುದನ್ನು ಕಾಣಬಹುದಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಒಂದು ದಿನದ ಅವಧಿಯಲ್ಲಿ 77.45 ಮಿ.ಮೀ. ಸುರಿದಿದ್ದು, ಜನವರಿಯಿಂದ ಇಲ್ಲಿಯವರೆಗೆ 2001.49 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 47.47 ಮಿ.ಮೀ. ಜನವರಿಯಿಂದ ಇಲ್ಲಿಯವರೆಗೆ 1151.79 ಮಿ.ಮೀ. ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 89.47 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ 1093.57 ಮಿ.ಮೀ. ಮಳೆ ಸುರಿದಿದೆ. ಇನ್ನು ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ಯನ್ನು ಗಮನಿಸಿದರೆ ಅತ್ಯಧಿಕ 175.80 ಮಿ.ಮೀ ಶಾಂತಳ್ಳಿಯಲ್ಲಿ ಹಾಗೂ ಅತಿ ಕಡಿಮೆ 17 ಮಿ.ಮೀ. ಪೊನ್ನಂಪೇಟೆಯಲ್ಲಿ ದಾಖಲಾಗಿದೆ. ಗರಿಷ್ಠ ಮಟ್ಟ 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ ಸದ್ಯ 2855.56 ಅಡಿಗಳಷ್ಟು ನೀರಿದ್ದು, ಜಲಾಶಯಕ್ಕೆ 10378 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 10471 ಕ್ಯುಸೆಕ್ ಹಾಗೂ ನಾಲೆಗೆ 150 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.