ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1, 2021 ರಿಂದ ಶೇ.11ರಷ್ಟು ತುಟ್ಟಿಭತ್ಯೆ ಬಿಡುಗಡೆಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಇದರಿಂದ 6.00 ಲಕ್ಷ ರಾಜ್ಯ ಸರ್ಕಾರಿ ನೌಕರರು, 4.50 ಲಕ್ಷ ಪಿಂಚಣಿದಾರರು, 3.00 ಲಕ್ಷ ನಿಗಮ – ಮಂಡಳಿಗಳ ನೌಕರರು ಆರ್ಥಿಕ ಸೌಲಭ್ಯ ಪಡೆಯಲಿದ್ದಾರೆ.
ಆದೇಶದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸಲಿದ್ದು, ರಾಜ್ಯದ ಎಲ್ಲಾ ನೌಕರರಿಗೆ ಜುಲೈ 1, 2021 ರಿಂದ ಮಂಜೂರಾಗುವ ತುಟ್ಟಿಭತ್ಯೆಯು ಮೂಲ ವೇತನದಲ್ಲಿ ಸೇರ್ಪಡೆಗೊಳ್ಳಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಜನವರಿ 1, 2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು.
ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜುಲೈ 1, 2021 ರಿಂದ ಅನ್ವಯವಾಗುವಂತೆ ಶೇ. 11ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಿದೆ. ಅದೇ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ಶೇ. 11ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 1, 2021 ರಿಂದ ಅನ್ವಯಗೊಳ್ಳುವಂತೆ ಬಾಕಿ ಇರುವ ಶೇ.11 ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿದ್ದಾರೆ.