ಗಜಪಡೆಗೆ ಅದ್ದೂರಿ ಸ್ವಾಗತ ಏಕಲವ್ಯ ಹೊಸ ಸೇರ್ಪಡೆ  ಮೈಸೂರಿನ ಕಡೆ ಗಜಪಡೆ ಗಜಪಯಣ- 2024

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಉದ್ಯಾನದ ವೀರನಹೊಸಹಳ್ಳಿಯಲ್ಲಿ ಸಡಗರ, ಸಂಭ್ರಮದ ನಡುವೆ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಆನೆಗಳ ಸ್ವಾಗತದೊಂದಿಗೆ ಈ ವರ್ಷದ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೂ ಮುನ್ನುಡಿ ಬರೆಯಲಾಯಿತು.

 ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ 9 ಆನೆಗಳನ್ನು ಸಂಪ್ರದಾಯದಂತೆ ಪೂಜೆ ಸಲ್ಲಿಸಿ ವಿವಿಧ ಫಲಗಳನ್ನು ನೀಡಿ ಸ್ವಾಗತಿಸಲಾಯಿತು. ವೀರನಹೊಸಹಳ್ಳಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ಸರ್ವಾಲಂಕೃತಗೊಂಡಿದ್ದ ಅಭಿಮನ್ಯು, ಭೀಮ,  ಕಾವೇರಿ, ಚೈತ್ರಾ, ಗೋಪಾಲಸ್ವಾಮಿ, ಅಭಿಮನ್ಯು ಮತ್ತು ಲಕ್ಷ್ಮೀ ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಿದರು. ಪುಷ್ಪಾರ್ಚನೆ ಬಳಿಕ ಆನೆಗಳು ಸೆಲ್ಯೂಟ್ ಮಾಡಿ ಮರು ಗೌರವ ಸಲ್ಲಿಸಿದವು. 

ಕಲಾತಂಡಗಳ ಮೆರುಗು: ಗಜಪಡೆ ಸ್ವಾಗತಕ್ಕೆ ಕಲಾತಂಡಗಳು ಮೆರುಗು ತಂದವು. ಸುರಿಯುತ್ತಿರುವ ಮಳೆಯಲ್ಲಿಯೇ ಕಲಾವಿದರ ಸಂಭ್ರಮ ಕುಂದಲಿಲ್ಲ. ಹಾಗಾಗಿ ಗಜಪಡೆ ಸ್ವಾಗತ ಸಮಾರಂಭ ಕಳೆಗಟ್ಟಿತ್ತು.

 ನಾದಸ್ವರ, ವೀರಗಾಸೆ, ಗೊಂಬೆ ಕುಣಿತ, ನಗಾರಿ, ಪೂಜಾ ಕುಣಿತ, ವೀರಭದ್ರನ ಕುಣಿತ ಆಕರ್ಷಿಸಿತು. ಗಿರಿಜನ ಆಶ್ರಮದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಕಳಸಹೊತ್ತು ಗಮನಸೆಳೆದರು.

 ಗಜಪಡೆಗೆ ಅರ್ಚಕ ಪ್ರಹ್ಲಾದ್ ದೀಕ್ಷಿತ್ ಪೂಜೆ ಸಲ್ಲಿಸಿದರು. ಆನೆಗಳ ಪಾದದ ಬಳಿ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಕೆಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ವಿವಿಧ ಹಣ್ಣು, ಹಂಪಲು, ಕಬ್ಬು ನೀಡಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಯೋಜಿಸಿದ್ದ ಕಾರಣ ಸರಳವಾಗಿ ಗಜಪಯಣ ಆಯೋಜಿಸಲಾಗಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ನಡೆಯಿತು.

ಪೂಜೆ ಬಳಿಕ ಗಜಪಡೆ ೭೦೦ ಮೀಟರ್ ಕಾಲ್ನಡಿಗೆ ಮೂಲಕ ಬಂದವು. ಈ ವೇಳೆ ಸುತ್ತ-ಮುತ್ತಲಿನ ಗ್ರಾಮಗಳ ಮತ್ತು ಹಾಡಿಗಳ ನೂರಾರು ಮಹಿಳೆ  ಗಜಪಡೆಗೆ ಪೂರ್ಣಕುಂಭ ಸ್ವಾಗತ ಕೋರಿದರು. ಜತೆಗೆ ಚಂಡೆ, ವೀರಗಾಸೆ ಸೇರಿದಂತೆ ಇತರೆ ಕಲಾವಿದರು ಸಾಥ್ ನೀಡಿದರು.