ಗುಜರಾತ್ ನೃತ್ಯಕ್ಕೆ ಹೆಜ್ಜೆ ಹಾಕಿದ ಡಿಸಿ! 1೦ದಿನಗಳ ಗುಜರಾತ್ ಕ್ರಾಫ್ಟ್ ಉತ್ಸವಕ್ಕೆ ಚಾಲನೆ, ಜು.25 ರವರೆಗೆ ನಡೆಯಲಿರುವ ಮೇಳ


ಮೈಸೂರು: 1೦ ದಿನಗಳ ಜೆಎಸ್‌ಎಸ್ ಹರ್ಬನ್ ಹಾತ್ ಮೇಳವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಗುಜರಾತ್ ಸಾಂಸ್ಕೃತಿಕ ನೃತ್ಯವನ್ನು ಗಮನಿಸಿದ್ದು, ಮಾತ್ರವಲ್ಲದೆ ತಾವು ಸಹ ಹೆಜ್ಜೆ ಹಾಕಿ ಗಮನ ಸೆಳೆದರು.
ಕೋವಿಡ್ ಎರಡನೇ ಅಲೆ ನಿಯಂತ್ರಣದಲ್ಲಿ ನಿರಂತರವಾಗಿ ಕರ್ತವ್ಯದಲ್ಲಿದ್ದ ಜಿಲ್ಲಾಧಿಕಾರಿಯವರು ಇಂತಹದೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.


ಭಾನುವಾರ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ 1೦ ದಿನಗಳ ಕಾಲ ನಡೆಯುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಮೇಳವನ್ನು ಉದ್ಘಾಟಿಸಿದರು. ಮೈಸೂರು ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಸತತವಾಗಿ 6ನೇ ಬಾರಿ ವಿಶೇಷವಾಗಿ ಭಾರತ ದೇಶದ ಪ್ರಾಂತೀಯ ಮೇಳವಾದ ಗುಜರಾತ್ ಕ್ರಾಫ್ಟ್ ಉತ್ಸವವನ್ನು ಜುಲೈ 25ರವರೆಗೆ ಪ್ರದರ್ಶನ ನಡೆಯಲಿದೆ.
ವಸ್ತು ಪ್ರದರ್ಶನ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಗುಜರಾತ್ ರಾಜ್ಯದ ವಿವಿಧ ಉಡುಪುಗಳು, ಮನೆ ಅಲಂಕಾರಿಕ ವಸ್ತುಗಳು ಮುಂತಾದವು ಅತ್ಯಂತ ಕಡಿಮೆ ದರದಲ್ಲಿ ಮೇಳದಲ್ಲಿ ಸಿಗುತ್ತಿದೆ. ಒಂದು ವಾರಗಳ ಈ ಮೇಳವನ್ನು ಮೈಸೂರು ಜನತೆ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಮೇಳದ ವಿಶೇಷತೆಗಗಳಿವು: ಈ ಬಾರಿಯ ಮೇಳವೂ ಹಿಂದಿನ ಮೇಳಗಳಿಗಿಂತ ವಿಭಿನ್ನವಾಗಿ ಇದೆ. ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾ ಶೀಲರಾಗಿರುವ ಸುಮಾರು 5೦ ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ. ಕುಶಲಕರ್ಮಿಗಳು ತಯಾರಿಸಿದ ಪಟೋಲೆ ಸೀರೆಗಳು, ಚಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‌ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಟ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಚಾಂದಿನಿ ಹಾಗೂ ಇನ್ನಿತರೆ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಗುತ್ತಿದೆ.


ಮೇಳದ ವಿಶೇಷ ಎಂದರೆ ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆಗಳು ಮತ್ತು ಆಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ, ಕಡಿಮೆ ಬೆಲೆಗೆ ದೊರೆಯಲಿದೆ. ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೋರೇಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ಈ ಮೇಳದ ಸಂದರ್ಭದಲ್ಲಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೆಶಕ ಎಸ್.ಪುಟ್ಟಸುಬ್ಬಪ್ಪ, ಕೆ.ಆರ್.ಸಂತಾನಂ, ಎಚ್.ಆರ್.ಮಹದೇವಸ್ವಾಮಿ, ರಾಕೇಶ್ ರೈ, ಎಂ ಶಿವನಂಜಸ್ವಾಮಿ, ಡಾ.ಎಸ್.ಡಿ.ಸ್ನೇಹಲ್ ಮಕ್ವಾನಾ ಇನ್ನಿತರರು ಉಪಸ್ಥಿತರಿದ್ದರು. ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಹತ್ತು ದಿನಗಳ ಕಾಲ ನಡೆಯುವ ಜೆಎಸ್‌ಎಸ್ ಅರ್ಬನ್ ಹಾತ್ ವಿಶೇಷ ಕೈಮಗ್ಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಉದ್ಘಾಟಿಸಿ, ಹೆಜ್ಜೆ ಹಾಕಿ ಗಮನಸೆಳೆದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗದ ನಿರ್ದೆಶಕ ಎಸ್.ಪುಟ್ಟಸುಬ್ಬಪ್ಪ, ಕೆ.ಆರ್.ಸಂತಾನಂ, ಎಚ್.ಆರ್.ಮಹದೇವಸ್ವಾಮಿ, ರಾಕೇಶ್ ರೈ, ಎಂ ಶಿವನಂಜಸ್ವಾಮಿ, ಡಾ.ಎಸ್.ಡಿ.ಸ್ನೇಹಲ್ ಮಕ್ವಾನಾ ಇನ್ನಿತರರು ಚಿತ್ರದಲ್ಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ

Leave a Reply

Your email address will not be published. Required fields are marked *