ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡರು ರಾಜ್ಯಸಭೆಯ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಪರೋಕ್ಷವಾಗಿ ಹಿಂದಿ ಹೇರಿಕೆಗೆ ದೇವೇಗೌಡರು ತಮ್ಮ ವಿರೋಧ ವ್ಯಕ್ತಪಡಿಸಿದ್ರು.
ಬೆಳಗ್ಗೆ 9 ಗಂಟೆಗೆ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸಮ್ಮುಖದಲ್ಲಿ ಎಚ್.ಡಿ.ದೇವೇಗೌಡರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಪ್ರಮಾಣವಚನ ಸ್ವೀಕಾರ ಮಾಡಿದ ದೇವೇಗೌಡರಿಗೆ ಇಡೀ ಸದನದ ಸದಸ್ಯರು ಕರತಾಡನ ಮಾಡಿ ಅಭಿನಂದನೆ ಸಲ್ಲಿಸಿದ್ರು. ಅಲ್ಲದೇ ಗೌಡರ ಬಗ್ಗೆ ಮೆಚ್ಚುಗೆ ಮಾತ್ನಾಡಿದ ಸಭಾಪತಿ ವೆಂಕಯ್ಯನಾಯ್ಡು, ದೇಶಕಂಡ ಅನುಭವಿ, ಮೇಧಾವಿ ನಾಯಕ ದೇವೇಗೌಡರು ಈ ಮನೆಯ ಸದಸ್ಯರಾಗಿರೋದು ಹೆಮ್ಮೆ ಮತ್ತು ಗರ್ವದ ವಿಚಾರ ಎಂದು ಕೊಂಡಾಡಿದ್ರು.
ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ದೇವೇಗೌಡರು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಕೊರೊನಾ ಹಿನ್ನೆಲೆ ಹಿರಿಯ ನಾಗರಿಕರಿಗೆ ಪ್ರಯಾಣಿಸಲು ಕೋವಿಡ್ ಪ್ರೇರಿತ ನಿರ್ಬಂಧಗಳಿಂದಾಗಿ ಆಗ ದೇವೇಗೌರಡು ನವದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇದೀಗ ವೈದ್ಯರ ಸಲಹೆಯ ಮೇರೆಗೆ ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ದೆಹಲಿಗೆ ಹೋಗಿದ್ದು, ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಸಭೆ ಸದಸ್ಯರಾದ ಬಳಿಕ ಇದೇ ಮೊದಲ ಬಾರಿ ದೇವೇಗೌಡರು ಕಲಾಪಕ್ಕೆ ಹಾಜರಾಗಿದ್ದಾರೆ. ದೇವೇಗೌಡರು 24 ವರ್ಷಗಳ ಬಳಿಕ ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.