ಮಡಿಕೇರಿ: ನಗರ ಹಾಗೂ ಗ್ರಾಮ ಪಂಚಾಯಿತಿಗಳು ಹೋಂ ಸ್ಟೇಗಳಿಗೆ ಅನಿಯಂತ್ರಿತ ತೆರಿಗೆ ಹೇರುತ್ತಿದ್ದು, ಸರಕಾರಿ ಆದೇಶದನ್ವಯ ಇದನ್ನು ರದ್ದುಪಡಿಸುವಂತೆ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಮನವಿ ಮಾಡಿದ್ದಾರೆ.
ಈ ಸಂಬಂಧ ಅಸೋಸಿಯೇಷನ್ ಸದಸ್ಯರು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಭಂವರ್ ಸಿಂಗ್ ಮೀನಾ ಅವರನ್ನು ಭೇಟಿ ಆಗಿ, ಪ್ರವಾಸೋದ್ಯಮ ನೀತಿಯ ಅನ್ವಯ ಅಧಿಕೃತ ಹೋಂ ಸ್ಟೇಗಳನ್ನು ವಾಣಿಜ್ಯ ಉದ್ಯಮ ಎಂದು ಪರಿಗಣಿಸದೆ, ತೆರಿಗೆ ವಿಧಿಸದಂತೆ ಸರಕಾರ ಈ ಹಿಂದೆ ಹೊರಡಿಸಿದ್ದ ನೀತಿಯ ಪ್ರತಿಯನ್ನು ನೀಡಲಾಯಿತು.
ಈ ಹಿಂದೆ ಸಿ.ಇ.ಓ. ಸ್ಥಾನದಲ್ಲಿದ್ದ, ಇಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಗರಿಷ್ಠ ಐನೂರು ರೂಪಾಯಿ ವಾರ್ಷಿಕ ತೆರಿಗೆ ಸಂಗ್ರಹಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಈಗ ಪ್ರತಿ ಗ್ರಾಮ ಪಂಚಾಯಿತಿಗಳು ಪ್ರತ್ಯೇಕ ಹಾಗೂ ಅಧಿಕ ತೆರಿಗೆ ವಸೂಲಿ ಮಾಡುತ್ತಿದ್ದು, ಈಗಾಗಲೇ ಮುಚ್ಚುವ ಹಂತದಲ್ಲಿರುವ ಹೋಂ ಸ್ಟೇಗಳಿಗೆ ಅಧಿಕ ಒತ್ತಡ ಉಂಟಾಗಿದೆ ಎಂದು ಬಿ.ಜಿ. ಅನಂತ ಶಯನ ಹೇಳಿದರು.
ಮನವಿಗೆ ಸ್ಪಂದಿಸಿದ ಭಂವರ್ ಸಿಂಗ್ ಮೀನಾ ಅವರು, ಈ ಬಗ್ಗೆ ಪಿ.ಡಿ.ಒ.ಗಳ ಜೊತೆ, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಸರಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದರು.
ಭೇಟಿ ಸಂದರ್ಭ ಹೋಂ ಸ್ಟೇ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ, ಪ್ರಧಾನ ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಕಾರ್ಯದರ್ಶಿ ನವೀನ್, ಸದಸ್ಯರಾದ ಮುದ್ದಪ್ಪ, ವಿಕಾಸ್ ಅಚ್ಚಯ್ಯ ಹಾಗೂ ಅಭಿಷೇಕ್ ಹಾಜರಿದ್ದರು.