ಕೆಡಿಪಿ ಸಭೆಯಲ್ಲಿ ಅನಧಿಕೃತ ದರ್ಗಾ, ಪ್ರಾರ್ಥನಾಮಂದಿರ ತೆರವುಗೊಳಿಸದೇ ದೇಗುಲ ಮುಟ್ಟಲು ಬಿಡಲ್ಲ ಎಂದ ಸಂಸದ ಪ್ರತಾಪಸಿಂಹ
ಮೈಸೂರು: ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಗುರಿಯಾಗಿಸಿಕೊಂಡು ಜಿಲ್ಲಾಡಳಿತ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಅರಸು ರಸ್ತೆಯಲ್ಲಿರುವ ಸಮಾಧಿ ತೆರವುಗೊಳಿಸದೇ ಒಂದೇ ಒಂದು ಹಿಂದೂ ದೇವಾಲಯ ತೆರವಿಗೆ ಮುಂದಾದರೂ ಹೋರಾಟಕ್ಕಿಳಿಯುವುದಾಗಿ ಸಂಸದ ಪ್ರತಾಪ್‌ಸಿಂಹ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಅವರು, ಸುಪ್ರೀಂಕೋರ್ಟ್ ಆದೇಶ ಮಾಡಿದ್ದು, ಅದನ್ನು ಪಾಲಿಸುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಹಿಂದೂ ದೇವಾಲಯಗಳನ್ನೇ ಗುರಿಯಾಗಿಸಿಕೊಳ್ಳುವುದಕ್ಕೆ ನನ್ನ ಆಕ್ಷೇಪವಿದೆ. ಹೀಗಾಗಿ ಮೊದಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ, ಸರ್ಕಾರಿ ಜಾಗದಲ್ಲಿರುವ ಹಾಗೂ ಪಾದಚಾರಿ ಮಾರ್ಗದಲ್ಲಿ ಅಡಚಣೆಯಾಗಿರುವ ಪ್ರಾರ್ಥನಾಮಂದಿರ, ಚರ್ಚ್‌ಗಳನ್ನು ಪಟ್ಟಿ ಮಾಡಿ. ಬಳಿಕ ಎಲ್ಲ ಧರ್ಮೀಯರನ್ನು ಕರೆದು ಸಭೆ ನಡೆಸಿ ಎಲ್ಲವನ್ನೂ ತೆರವುಗೊಳಿಸಿ ಎಂದು ಒತ್ತಾಯಿಸಿದರು.
ದೇವರಾಜ ಅರಸು ರಸ್ತೆಯಲ್ಲಿ ಸಮಾಧಿಯನ್ನು ಹಲವು ವರ್ಷಗಳಿಂದ ತೆರವುಗೊಳಿಸಿಲ್ಲ. ಇರ್‍ವಿನ್ ರಸ್ತೆ ಅಗಲೀಕರಣಕ್ಕಾಗಿ ಅಲ್ಲಿನ ಪ್ರಾರ್ಥನಾ ಮಂದಿರದ ತಡೆಗೋಡೆ ತೆರವುಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇನ್ನು ಅಕ್ರಮವಾಗಿ ನಿರ್ಮಾಣ ಆಗುತ್ತಿರುವ ಪ್ರಾರ್ಥನಾ ಮಂದಿರಗಳಿಗೆ ಲೆಕ್ಕವೇ ಇಲ್ಲ. ಈಚೆಗೆ ಕೆಸರೆಯಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿದೆ. ಈ ಎಲ್ಲ ಸಂಗತಿಗಳು ತಿಳಿದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ಪ್ರಾರ್ಥನಾಮಂದಿರಗಳು ರಸ್ತೆಗೆರೆಡು ತಲೆ ಎತ್ತುತ್ತಿವೆ. ಅವುಗಳಿಗೆ ಮಾನದಂಡವಿಲ್ಲವೆ? ತೆರವುಗೊಳಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾನೇ ಮುಂದೆ ಬರುತ್ತೇನೆ ತೆರವಿಗೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗದುಕೊಳ್ಳದೇ ಹಿಂದೂ ದೇವಸ್ಥಾನಗಳನ್ನು ಮಾತ್ರ ಏಕಾಏಕಿ ತೆರವುಗೊಳಿಸುವುದು ಸರಿಯಲ್ಲ. ರಾತ್ರೋರಾತ್ರಿ ಕಳ್ಳರಂತೆ ದೇವಸ್ಥಾನ ತೆರವು ಗೊಳಿಸುತ್ತಿದ್ದು, ನಿನ್ನೆ ಹುಲ್ಲಹಳ್ಳಿಯಲ್ಲಿ ದೇವಸ್ಥಾನ ತೆರವುಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಅನಧಿಕೃತವಾಗಿ ನಿರ್ಮಾಣವಾಗಿರುವ ಪ್ರಾರ್ಥನಾ ಮಂದಿರ ಮತ್ತು ಚರ್ಚ್ ತೆರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಹೆದರುತ್ತಿದ್ದಾರೆ. ಆದರೆ, ಹಿಂದೂ ದೇವಸ್ಥಾನ ತೆರವುಗೊಳಿಸಿದರೆ ಕೇಳುವವರು ಯಾರಿಲ್ಲ ಎಂದು ಭಾವಿಸಿದ್ದಾರೆ. ದೇವರಾಜ ರಸ್ತೆಯಲ್ಲಿರುವ ಸಮಾಧಿಯನ್ನು ಕೂಡಲೇ ತೆರವುಗೊಳಿಸಬೇಕು. ಅದನ್ನು ತೆರವುಗೊಳಿಸದೆ ಹಿಂದೂ ದೇವಸ್ಥಾನಗಳನ್ನು ಮುಟ್ಟಿದ್ದರೆ, ಸಮ್ಮನೆ ಇರುವುದಿಲ್ಲ. ನಾನೇ ಬೀದಿಗಿಳಿಯಬೇಕಾಗುತ್ತದೆ. ಇದು ನನ್ನ ಮನವಿಯಲ್ಲ ಎಚ್ಚರಿಕೆ ಎಂದರು.
2013ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಪಟ್ಟಿ ಪ್ರಕಾರ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಜಿ.ಟಿ.ದೇವೇಗೌಡ 2013ರಲ್ಲಿ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೇ ಕುಳಿತಿಲ್ಲ ಪಟ್ಟಿ ತಯಾರಿಸಿದ್ದಾರೆ. ಶೇ.೫೦ರಷ್ಟು ಹಿಂದಿನ ದೇವಾಲಯಗಳನ್ನು ಗುರುತಿಸುವ ಕೆಲಸವೇ ಅಧಿಕಾರಿಗಳಿಂದಾಗಿಲ್ಲ ಎಂದು ದೂರಿದರು.
2013ರ ಪಟ್ಟಿಯ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಆಗಿರುವ ಅನಧಿಕೃತ ನಿರ್ಮಾಣ ಆಗಿರುವ ಎಲ್ಲಾ ಧರ್ಮದ ಧಾರ್ಮಿಕ ಕಟ್ಟಡ ತೆರವು ಆಗಲಿ. ಇದಕ್ಕೆ ಆಯಾಯ ಧಾರ್ಮಿಕ ಮುಖಂಡರ ಸಭೆ ಕರೆದು ಅವರಿಗೆ ಮನವರಿಕೆ ಮಾಡಿಕೊಟ್ಟು, ವಿಶ್ವಾಸಕ್ಕೆ ತೆಗದುಕೊಂಡು ತೆರವು ಕಾರ್ಯಾಚರಣೆ ನಡೆಸಿ ಎಂದು ಪ್ರತಾಪ್‌ಸಿಂಹ ಸಲಹೆ ನೀಡಿದರು.