
ಮೈಸೂರು: ಬಿ.ವಿ.ಕಾರಂತರ ಜನ್ಮ ದಿನವಾದ ಸೆ.19 ರಿಂದ 26ರವರೆಗಿನ 8ದಿನಗಳ ಕಾಲದ ಭಾರತೀಯ ರಂಗಸಂಗೀತ ದಿನವನ್ನು `ಭಾರತೀಯ ರಂಗಸಂಗೀತ-ನಾಟಕೋತ್ಸವ’ವಾಗಿ `ಕಾರಂತ ರಂಗನಮನ’ ಎಂಬ ಶೀರ್ಷಿಕೆಯಡಿ ವಿಭಿನ್ನ ರೀತಿಯಲ್ಲಿ ಆಚರಿಸಲು ಮೈಸೂರು ರಂಗಾಯಣ ಸಿದ್ಧತೆ ನಡೆಸಿದೆ.
ಈ ಸಂಬಂಧ ನಗರದ ರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಬಿ.ವಿ.ಕಾರಂತರ ನೆನೆಯುವ ಜತೆಗೆ ಕಾರಂತರು ಮೂಡಿಸಿದ ಛಾಪನ್ನು ಯುವರಂಗಕರ್ಮಿಗಳಿಗೆ ಪರಿಚಯ ಮಾಡಿಸುವುದು ನಾಟಕೋತ್ಸವದ ಮುಖ್ಯ ಉದ್ದೇಶವಾಗಿದೆ. ಕಾರಂತರನ್ನು ನೆನೆಯುವುದಕ್ಕಿಂತಲೂ ರಂಗಭೂಮಿಯಲ್ಲಿ ಅವರ ಸೇವೆಯನ್ನು ಯುವ ಸಮೂಹಕ್ಕೆ ಮನದಟ್ಟು ಮಾಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಇದಕ್ಕಾಗಿ ರಂಗಾಯಣ ಮತ್ತು ಬಾಬುಕೋಡಿ ಕಾರಂತರ ರಂಗಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಸೆ.19ರಿಂದ 26ರವರೆಗೆ 8 ದಿನಗಳ ಕಾಲ ಬಿ.ವಿ.ಕಾರಂತರ ಜನ್ಮದಿನವಾದ ಭಾರತೀಯ ರಂಗಸಂಗೀತ ದಿನವನ್ನು `ಭಾರತೀಯ ರಂಗಸಂಗೀತ-ನಾಟಕೋತ್ಸವ’ವಾಗಿ `ಕಾರಂತ ರಂಗನಮನ’ ಎಂಬ ಶೀರ್ಷಿಕೆಯಡಿ ಆಚರಿಸುಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿವರ: ಸೆ.19ರ ಉದ್ಘಾಟನಾ ದಿನದಂದು ರಂಗಚಾವಡಿಯಲ್ಲಿ ರಾಜಸ್ಥಾನದ ಸೂಫಿ ಗಾಯಕ ಮುಖಿಯಾರ್ ಅಲಿ ತಂಡದ `ಸೂಫಿ ಗಾಯನ’ ಪ್ರದರ್ಶನಗೊಳ್ಳಲಿದೆ. ಸೆ.20ರ ಸಂ.6.30ಕ್ಕೆ ಮಹಾರಾಷ್ಟ್ರ ಜನಪದ ಗಾಯಕಿ ಶಕುಂತಲಾ ಬಾಯಿ ನಗರ್‌ಕರ್‌ರಿಂದ `ಲಾವಣಿ ಕೆ ರಂಗ್’ ಸಂಗೀತ ಕಾರ್ಯಕ್ರಮ ನೀಡುವರು. ರಂಗಾಯಣದ ಬಿ.ವಿ.ಕಾರಂತರ ಪರಿಕಲ್ಪನೆಯ `ರಾಗ-ಸರಾಗ’ ಹೆಸರಿನ ರಂಗಗೀತೆಗಳ ಗಾಯನ ನಡೆಯಲಿದೆ. ಸೆ.22ರಿಂದ 25ರವರೆಗೆ ಪ್ರತಿ ನಿತ್ಯ ಸಂಜೆ 6:30ಕ್ಕೆ `ಆಧೇ ಆಧೂರೇ’, `ಬಕ’, `ಮೂಕನ ಮಕ್ಕಳು’ ಮತ್ತು `ಚಂದ್ರಮುಖಿ’ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ.
ಸೆ.26ಕ್ಕೆ ರಂಗಭೀಷ್ಮರ ಅವಲೋಕನ: ಸೆ.19ರಂದು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕಿ ವೀಣಾಶರ್ಮ ಭೂಸನೂರುಮಠ `ಕಾರಂತರ ಪುತ್ಥಳಿ’, ಕೈಗಾರಿಕೋದ್ಯಮಿ ಎಂ.ಜಗನ್ನಾಥ ಶೆಣೈ `ಕಾರಂತ ರಂಗೋತ್ಸವ’ ಉದ್ಘಾಟಿಸಲಿದ್ದು, ರಂಗಭೂಮಿ ನಟ ಸುಂದರ್‌ರಾಜ್ ಅಧ್ಯಕ್ಷತೆವಹಿಸುವರು. ಕಾರಂತರ ಆತ್ಮಕಥನ ಆಗಿರುವ `ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಬಿಡುಗಡೆಯಾಗಲಿದೆ. ಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ವೀರಣ್ಣ ಮ ಅರ್ಕಸಾಲಿ, ಬೆಂಗಳೂರು ಬಿ.ವಿ.ಕಾರಂತರಂಗ ಪ್ರತಿಷ್ಠಾನದ ವ್ಯವಸ್ಥಾಪಕ ಸದಸ್ಯ ಜಯರಾಂ ಪಾಟೀಲ ಭಾಗವಹಿಸುವರು.
ಸೆ.26ರ ರಂಗಭೀಷ್ಮರ ರಂಗಾವಲೋಕನ ವಿಚಾರ ಸಂಕಿರಣದಲ್ಲಿ `ಕಾರಂತರ ರಂಗ ಭಾರತದಲ್ಲಿ ನಾವು’ ವಿಷಯ ಕುರಿತು ಚಿತ್ರ ನಟ ಶ್ರೀನಿವಾಸ ಪ್ರಭು, `ಕಾರಂತ ರಂಗಮಾರ್ಗ’ ಕುರಿತು ಸುರೇಶ್ ಆನಗಳ್ಳಿ ಮಾತನಾಡಲಿದ್ದಾರೆ. ಅಂದು ಸ.6:30ಕ್ಕೆ ಶಕೀಲ್ ಅಹಮ್ಮದ್ ವಿನ್ಯಾಸ ನಿರ್ದೇಶನದ `ಅನಾಮಿಕನ ಸಾವು’ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ.25ಕ್ಕೆ ಪರ್ವ ಪ್ರದರ್ಶನ: ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ನಿರ್ದೇಶಕ ಪ್ರಕಾಶ್ ಬೆಳವಾಡಿ ನಿರ್ದೇಶನದ `ಪರ್ವ’ ನಾಟಕ ಇದೀಗ 11ಪ್ರದರ್ಶನಗಳನ್ನು ಮುಗಿಸಿದ್ದು, ಮುಂದಿನ ಪ್ರದರ್ಶನ ಬಿ.ವಿ.ಕಾರಂತರ ರಂಗೋತ್ಸವದ ನೆನಪಿನಲ್ಲಿ ಸೆ.25ರಂದು ನಡೆಯಲಿದೆ. ಅಕ್ಟೋಬರ್ 2,3, 9,10, 23, 24 ರಂದು ಮುಂದುವರೆದ ಪ್ರದರ್ಶನಗಳಿರಲಿದೆ. ಒಟ್ಟು 06 ಪ್ರದರ್ಶನಗಳು ಮಾತ್ರ ರಂಗಾಯಣ, ಮೈಸೂರಿನ ಭೂಮಿಗೀತದಲ್ಲಿ ಇರಲಿದ್ದು, ನವಂಬರ್‌ನಲ್ಲಿ `ಪರ್ವ’ದ ರಂಗಯಾತ್ರೆ ಪ್ರಾರಂಭವಾಗಲಿದ್ದು, ರಾಜ್ಯದ ಬೇರೆ ಬೇರೆ ಕಡೆ ಪ್ರದರ್ಶನಗಳಿರಲಿದೆ ಎಂದು ಹೇಳಿದರು.
ರಂಗಶಿಕ್ಷಣ ಫಲಿತಾಂಶದತ್ತ ಚಿತ್ತ: ರಂಗಾಯಣ ಮೈಸೂರು ಸಂಸ್ಥೆ ಕಳೆದ 11 ವರ್ಷಗಳಿಂದ ನಡೆಸುತ್ತ ಬಂದಿರುವ ರಂಗಭೂಮಿ ಶಿಕ್ಷಣದ ಡಿಪ್ಲೊಮೋ ತರಗತಿಗಳು 2020-21ನೇ ಸಾಲಿನ ಶೈಕ್ಷಣಿಕ ಅವಧಿ ಪರೀಕ್ಷೆಗಳು ಮುಗಿದಿದ್ದು, ಪರೀಕ್ಷಾ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದೇವೆ. ಮೊದಲ ಸೆಮಿಸ್ಟರ್‌ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎರಡನೇ ಸೆಮಿಸ್ಟರ್ ನಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ `ಮ್ಯಾಕ್‌ಬೆತ್’, `ತಾಮ್ರಪತ್ರ’, `ಕದಡಿದ ನೀರು’ ಎಂಬ ಮೂರು ನಾಟಕಗಳ ಯಶಸ್ವಿ ಪ್ರದರ್ಶನ ಕೂಡ ನೀಡಿರುವುದಾಗಿ ತಿಳಿಸಿದರು.
ಅ.1ರಿಂದ ಶೈಕ್ಷಣಿಕ ಪ್ರಾರಂಭ: 2020-21ನೇ ಸಾಲಿಗೆ ಇದೀಗ ಆಯ್ಕೆಗೊಳ್ಳುವ 15 ವಿದ್ಯಾರ್ಥಿಗಳಿಗಾಗಿ ಸಂದರ್ಶನ ನಡೆದಿದ್ದು, ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಅ.1ರಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದೆ. ಈ ಸಂಸ್ಥೆ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಮೈಸೂರು ರಂಗಾಯಣವನ್ನು ಕಟ್ಟಿ ಬೆಳೆಸಿದ ಬಿ.ವಿ.ಕಾರಂತರ ಪುತ್ಥಳಿಯನ್ನು ರಂಗಾಯಣದ ಉದ್ಯಾನದಲ್ಲಿ ಅನಾವರಣಗೊಳಿಸಲಾಗುತ್ತಿದ್ದು, ಕಾರಂತರ ಸಂಪೂರ್ಣ ಭಿತ್ತಿಚಿತ್ರಗಳ ಪ್ರದರ್ಶನ ಹಾಗೂ `ಕಾರಂತ ರಂಗಾವಲೋಕನ’ ಎಂಬ ಶೀರ್ಷಿಕೆಯ ವಿಚಾರ ಸಂಕಿರಣ ಈ ಬಾರಿ ವಿಶೇಷವಾಗಿ ನಡೆಯಲಿದೆ. ಜತೆಗೆ ಎಲ್ಲಾ ಜಿಲ್ಲೆಗಳಲ್ಲಿ ಸೆ.೧೯ರಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಒಂದು ರಂಗತಂಡದಿಂದ `ಭಾರತೀಯ ರಂಗಸಂಗೀತ ದಿನ’ ಕಾರ್ಯಕ್ರಮ `ರಂಗಸಂಗೀತ’ದೊಂದಿಗೆ ಪ್ರತಿ ಜಿಲ್ಲೆಯಲ್ಲೂ ಮೈಸೂರು ರಂಗಾಯಣದ ಸಹಕಾರದಲ್ಲಿ ಆಯೋಜಿಸಲಾಗುತ್ತಿದೆ.
-ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ