* 5 ತಂಡಗಳಿಂದ ಯಶಸ್ವಿ ಕಾರ್ಯಾಚರಣೆ
* ಶೂಟೌಟ್‌ಗೆ ಕಂಟ್ರಿ ರಿಲ್ವಾರ್ ಬಳಕೆ
* ನಗರ ಪೊಲೀಸರಿಗೆ ೫ ಲಕ್ಷ ಬಹುಮಾನ
ಮೈಸೂರು: ಹಾಡಹಗಲೇ ಚಿನ್ನಭರಣ ಲೂಟಿ ಮತ್ತು ಓರ್ವ ಯುವಕನ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು 8ದರೋಡೆಕೋರರ ಪೈಕಿ6 ಮಂದಿಯನ್ನು ಬಂಧಿಸಿದ್ದಾರೆ.

ವ್ಯವಸ್ಥಿತವಾಗಿ ದರೋಡೆ ನಡೆಸಿ ದೇಶದ ವಿವಿಧ ರಾಜ್ಯಗಳಲ್ಲಿ ಚದುರಿದ್ದ ಆರೋಪಿಗಳನ್ನು ಘಟನೆ ನಡೆದ ನಾಲ್ಕು ದಿನಗಳಲ್ಲಿ ಯಶಸ್ವಿ ಕಾರ್ಯಾಚರಣೆ ಮೂಲಕ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.23ರಂದು ನಡೆದಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 5 ತಂಡ ರಚಿಸಿ ದೇಶಾದ್ಯಂತ ಎಲ್ಲಾ ಪೊಲೀಸರಿಗೂ ದರೋಡೆಕೋರರ ಮುಖಚಿತ್ರವನ್ನು ರವಾನೆ ಮಾಡಿದ್ದರು.
ಪ್ಲ್ಯಾನ್ ಮಾಡಿದ ಮೈಸೂರಿನ ವ್ಯಕ್ತಿ: ವಿದ್ಯಾರಣ್ಯಪುರಂ ಅಮೃತ ಗೋಲ್ಡ್ ಅಂಡ್ ಸಿಲ್ವರ್‌ನಲ್ಲಿ ದರೋಡೆ ಮಾಡಲು ಸ್ಥಳೀಯರು ಪ್ಲ್ಯಾನ್ ಮಾಡಿದರೆ, ಹೊರಗಿನವರು ದರೋಡೆ ಮಾಡಿದರು. ಪ್ರಕರಣದಲ್ಲಿ ನಾಲ್ವರು ಪ್ಲ್ಯಾನ್ ಮಾಡಿದ್ದು, ಇವರ ಪೈಕಿ ಮೈಸೂರು, ಬೆಂಗಳೂರಿನ ವ್ಯಕ್ತಿಗಳು ಪ್ರಮುಖರಾಗಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ಲ್ಯಾನ್ ಮಾಡಿದ ಮೈಸೂರಿನ ವ್ಯಕ್ತಿ ಮೊದಲು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡಿ, ಬಳಿಕ ಜ್ಯುವೆಲ್ಲರಿ ಅಂಗಡಿ ಮಾಡಿದ್ದರು. ಪ್ರಕರಣವೊಂದರಲ್ಲಿ ಜೈಲಿಗೂ ಹೋಗಿದ್ದು ಬಂದಿದ್ದರು. ದರೋಡೆಯಲ್ಲಿ ಬಹಳ ಬುದ್ಧಿವಂತಿಕೆ ತೋರಿಸಿದ್ದಾರೆ.
ಕೃತ್ಯ ನಡೆಸಿ ಪಶ್ಚಿಮ ಬಂಗಾಳ, ಮುಂಬೈ, ರಾಜಸ್ತಾನ ಮತ್ತು ಜಮ್ಮುಕಾಶ್ಮೀರಕ್ಕೆ ತೆರಳಿದ್ದ ನಾಲ್ವರ ದರೋಡೆಕೋರರನ್ನು ನಗರ ಪೊಲೀಸ್ ಆಯುಕ್ತರು ರೂಪಿಸಿದ್ದ ತಂಡ ಬಂಧಿಸಿದೆ. ಬಂಧಿತರಿಂದ ಚಿನ್ನಾಭರಣ ಸಿಕ್ಕಿದೆ. ಜಾರ್ಜ್‌ಸೀಟ್ ಸಲ್ಲಿಕೆಯಾದ ಬಳಿಕ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಕರೆತರಲಾಗುತ್ತಿದೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನಲೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ನಾಲ್ಕೇ ದಿನಗಳಲ್ಲಿ ಪ್ರಕರಣವನ್ನು ಸುಖಾಂತ್ಯ ಮಾಡಿರುವುದಕ್ಕೆ ನಗರ ಪೊಲೀಸರಿಗೆ ಅಭಿನಂದನೆ ತಿಳಿಸಿದರು.
5 ಲಕ್ಷ ಬಹುಮಾನ
ದರೋಡೆ ಪ್ರಕರಣ ಪತ್ತೆ ಹೆಚ್ಚಿರುವುದು ಸಂತೋಷ ತಂದಿದೆ. ಯಶಸ್ವಿ ಕಾರ್ಯಾಚರಣೆ ಮೂಲಕ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರಿಗೆ 5ಲಕ್ಷ ರೂ. ಬಹುಮಾನ ನೀಡುತ್ತೇನೆ.
-ಅರಗ ಜ್ಞಾನೇಂದ್ರ, ಗೃಹ ಸಚಿವ