ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ಲೋನ್ ಪಡೆಯಲು ಮಹಿಳೆ ಯತ್ನಿಸಿದ ಪ್ರಕರಣ ಹೊಸ ತಿರುವು ಪಡೆದಿದ್ದು, ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಒಪ್ಪಂದ ಮಾಡಿಕೊಂಡು ಪ್ರಕರಣಕ್ಕೆ ತೆರೆ ಎಳೆಯುತ್ತಿದ್ದಂತೆಯೇ ಇಡೀ ಪ್ರಕರಣ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ.
ಈ ಪ್ರಕರಣಕ್ಕೆ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಎಂಟ್ರಿ ಕೊಟ್ಟಿದ್ದು, ಇಡೀ ಪ್ರಕರಣ ಹೊಸ ತಿರುವು ಪಡೆದಿರುವುದಲ್ಲದೆ, ನಟ ದರ್ಶನ್ ಸುತ್ತಲೇ ಆರೋಪಗಳು ಸುತ್ತಲಾರಂಭಿಸಿದೆ.
ಮೈಸೂರಿನಲ್ಲಿ ನಡೆದ ಒಂದಷ್ಟು ಘಟನೆಗಳು ಮತ್ತು ಗಲಾಟೆಗಳು, ವ್ಯವಹಾರಗಳು ಸೇರಿದಂತೆ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಂದ್ರಜಿತ್ ಲಂಕೇಶ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆ ನಂತರ ಮಾಧ್ಯಮದವರ ಮುಂದೆ ಬಂದು ಮಾತನಾಡಿದ ಇಂದ್ರಜಿತ್ ಲಂಕೇಶ್ ನೇರವಾಗಿ ನಟ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಅವರು ಮೈಸೂರಿನ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದು, ಮಹಿಳೆಯರ, ಸಾಮಾನ್ಯರ ಸಮಸ್ಯೆಗಳನ್ನು ಸೆಟ್ಲ್ ಮೆಂಟ್ ಮಾಡುವ ಮೂಲಕ ಪೊಲೀಸ್ ಸ್ಟೇಷನ್ ಗಳು ಸೆಟ್ಲ್ ಮೆಂಟ್ ಸ್ಟೇಷನ್ ಗಳಾಗಿವೆ. ರಾಕೇಶ‍್ ಪಾಪಣ್ಣ ಪೊಲೀಸ್ ಸ್ಟೇಷನ್ ಗಳನ್ನು ನಿಯಂತ್ರಿಸುತ್ತಾರೆ ಎನ್ನುವುದಾದರೆ ನಿವೇನು ಬಳೆ ತೊಟ್ಟುಕೊಂಡಿದ್ದೀರ ಎಂದು ಪ್ರಶ್ನಿಸಿದ್ದಾರೆ.
25 ಕೋಟಿ ವಂಚನೆ ಮಾಡಲು ಯತ್ನಿಸಿದ ಅರುಣ್ ಕುಮಾರಿ ಗೊತ್ತಿಲ್ಲ ಎನ್ನುವುದಾದರೆ ಆಕೆಯನ್ನು ಏಕೆ ತೋಟಕ್ಕೆ ಕರೆಯಿಸಿಕೊಂಡಿದ್ದೀರ? ನಿಮ್ಮ ಮನೆ ಹತ್ತಿರವಿರುವ ಆರ್ಚ್ ಬಳಿ ಕರೆಯಿಸಿಕೊಂಡು ನಿಮ್ಮ ಫ್ರೆಂಡ್ಸ್ ಇನೋವ ಕಾರಿನಲ್ಲಿ ಬೆದರಿಕೆ ಹಾಕಿದ್ದೇಕೆ?
ಹೋಟೆಲ್ ನ ದಲಿತ ಸಫ್ಲೈಯರ್ ಗೆ ಹೊಡೆದಿದ್ದು ಆತನ ಕಣ್ಣು ಮಂಜಾಗಿದೆ. ಒಂದು ವೇಳೆ ಆತನಿಗೆ ಹೊಡೆದಿಲ್ಲ ಎನ್ನುವುದಾದರೆ ಅವರು ನಂಬುವ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಸವಾಲ್ ಹಾಕಿದ್ದಾರೆ.
ತಲೆ ತೆಗೆಯುತ್ತೇನೆ ಎನ್ನುವುದು ಒಬ್ಬ ಸೆಲೆಬ್ರಿಟಿ ಮಾತನಾಡುವ ಮಾತಾ ಎಂದು ಪ್ರಶ್ನಿಸಿರುವ ಅವರು ಆ ರೀತಿ ಮಾತನಾಡಿದವರು ಹೇಗೆ ರಾಜೀ ಮಾಡಿಕೊಂಡರು. 25 ಕೋಟಿ ವಂಚನೆ ಮಾಡುವುದು ಅಂದರೆ ತಮಾಷೆಯಾ ಮಾತಾ? ಈ ನಟ ಇನ್ನು ಬುದ್ದಿ ಕಲಿತಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಾಕ್ಷಿ ಇಲ್ಲಾಂದ್ರೆ ನಾನು ಕೊಡುತ್ತೇನೆ ಎಂದಿದ್ದಾರೆ. ಒಟ್ಟಾರೆ ಪ್ರಕರಣ ಹೊಸ ತಿರುವಿನಲ್ಲಿ ಸಾಗುತ್ತಿದ್ದು, ಕೊನೆಗೆ ಎಲ್ಲವೂ ನಟ ದರ್ಶನ್ ಸುತ್ತಲೇ ಸುತ್ತಲಾರಂಭಿಸಿದೆ.
ಇನ್ನೊಂದೆಡೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಮಾಧ್ಯಮಕ್ಕೆ ಅಂತಹ ಘಟನೆ ನಮ್ಮ ಹೋಟೆಲ್ ನಲ್ಲಿ ನಡೆದಿಲ್ಲ ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಇಂದ್ರಜಿತ್ ಲಂಕೇಶ್ ನಿಮ್ಮ ಸಂಸ್ಥೆಗೆ ದುಡಿದವರ ಪರ ನಿಲ್ಲಿ ಎಂದು ಕಿವಿ ಮಾತು ಹೇಳಿದ್ದಾರೆ. ಅಲ್ಲದೆ, ಅವತ್ತಿನ ದಿನ ಸಿಸಿ ಟಿವಿ ಪರಿಶೀಲಿಸಿ ಒಂದು ವೇಳೆ ಅವರು ಕೊಟ್ಟಿಲ್ಲಾಂದ್ರೆ ನಾನು ಸಾಕ್ಷಿಗಳನ್ನು ಕೊಡುತ್ತೇನೆ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.